ಬೆಂಗಳೂರು: ಮೈಸೂರು ದಸರಾವನ್ನು ಬೂಕರ್ ಪ್ರಶಸ್ತಿ ವಿಜೇತ ಬಾನುಮುಷ್ತಾಕ್ ಉದ್ಘಾಟಿಸುವುದನ್ನು ವಿರೋಧಿಸುವುದು ಸರಿಯಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾನುಮುಷ್ತಾಕ್ ಇಡೀ ದೇಶಕ್ಕೆ ಕಿರೀಟವಾಗಿದ್ದಾರೆ. ಅವರನ್ನು ಪ್ರತ್ಯೇಕವಾಗಿ ನೋಡುತ್ತಿರುವುದು ಏಕೆ? ದೇಶಕ್ಕೆ, ಕನ್ನಡ ನಾಡಿಗೆ ಗೌರವ ತಂದುಕೊಟ್ಟ ಅವರು ನಾಡಹಬ್ಬದ ಉದ್ಘಾಟನೆಗೆ ಆಯ್ಕೆಯಾಗಿದ್ದಾರೆ. ವಿರೋಧಿಸುವವರಿಗೆ ಏನೆಂದು ಹೇಳಲು ಸಾಧ್ಯ ಎಂದರು.
ಸಂವಿಧಾನದ ಪೀಠಿಕೆಯ ಪ್ರಕಾರ ಧಾರ್ಮಿಕವಾಗಿ, ಸಾಮಾಜಿಕವಾಗಿ ಎಲ್ಲರೂ ಒಂದೇ. ದಸರಾ ಸಾಂಸ್ಕೃತಿಕ ಜೀವನ ಅಭಿವ್ಯಕ್ತಿಗೊಳಿಸುವ ಹಬ್ಬ. ಇದು ಧರ್ಮದ ಆಚರಣೆಯಲ್ಲ, ಧರ್ಮದ ವಿಚಾರ ಜನರಿಗೆ ಬಿಟ್ಟದ್ದು ಎಂದರು.
ನಾಡ ಹಬ್ಬಕ್ಕೆ ಸರ್ವರೂ ಸಹಭಾಗಿಗಳು. ಈಶ್ವರ್ ಅಲ್ಲಾ ತೇರೆನಾಮ್ ಎಂದು ಹೇಳಿಕೊಂಡು ಬಂದಿದ್ದೇವೆ. ಬಕ್ರೀದ್ ಸಂಭ್ರಮದಲ್ಲಿ ನಾವೂ ಭಾಗಿಯಾಗಿದ್ದೇವೆ. ನಾಡಿನ ಸಾಂಸ್ಕೃತಿಕ ವಿಚಾರದಲ್ಲೂ ರಾಜಕೀಯ ಮಾಡುವುದೇಕೆ? ಸಂವಿಧಾನ ಬದ್ಧವಾಗಿಯೇ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಮರುಪರಿಶೀಲಿಸುವ ಅಗತ್ಯವೇ ಇಲ್ಲ ಎಂದರು.





