ಬೆಂಗಳೂರು: ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರಿಬ್ಬರ ಕೈವಾಡವಿರುವ ಬಗ್ಗೆ ವರದಿಯಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಣೆ ಪ್ರಕರಣ ದೇಶದ ಇತಿಹಾಸದಲ್ಲೇ ಅಪರೂಪವೆನ್ನಲಾಗಿದೆ. ಈ ಪ್ರಕರಣ ಬೆಂಗಳೂರನ್ನು ಕೇಂದ್ರೀಕರಿಸಿ ರಾಜ್ಯ ಸರ್ಕಾರದ ಪ್ರಭಾವಿಗಳ ಸುತ್ತ ಅನುಮಾನದ ಹುತ್ತ ಬೆಳೆದು ಇದೀಗ ಸಚಿವರಿಬ್ಬರ ಕೈವಾಡ ಇರುವ ಬಗ್ಗೆ ವರದಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಈ ಪ್ರಕರಣದಲ್ಲಿ ಹವಾಲಾ ನಂಟು ಬೆಸೆದುಕೊಂಡಿರುವ ಶಂಖೆ ವ್ಯಕ್ತವಾಗಿದ್ದು, ಆರೋಪಿ ರನ್ಯಾ ರಾವ್ ಬಂಧನದ ಸಂದರ್ಭದಲ್ಲಿ ಸಚಿವರೊಬ್ಬರನ್ನು ಸಂಪರ್ಕಿಸಲು ಯತ್ನಿಸಿರುವುದು ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸ್ಪಷ್ಟ ಅನುಮಾನಗಳನ್ನು ಮೂಡಿಸಿದೆ. ರನ್ಯಾ ರಾವ್ ಅವರು ಅತ್ಯುನ್ನತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯೂ ಆಗಿರುವ ಹಿನ್ನೆಲೆಯಲ್ಲಿ ಇಡೀ ಸರ್ಕಾರದ ವ್ಯವಸ್ಥೆಯ ಮೇಲೆ ಕರಿ ನೆರಳು ಆವರಿಸಿದೆ, ಸದರಿ ಪ್ರಕರಣ ನಮ್ಮ ರಾಜ್ಯಕ್ಕೂ ಕಳಂಕ ತಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಕರಣದ ಕುರಿತು ವಾಸ್ತವ ಸ್ಥಿತಿಯನ್ನು ಜನತೆಗೆ ತಿಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವರದಿಯಾಗಿರುವಂತೆ ಈ ಪ್ರಕರಣದಲ್ಲಿ ಸಚಿವರುಗಳು ಭಾಗಿಯಾಗಿದ್ದರೆ ಅದರ ಮಾಹಿತಿ ಈಗಾಗಲೇ ಮುಖ್ಯಮಂತ್ರಿಗಳ ಕೈ ಸೇರಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡು ತಪ್ಪಿತಸ್ಥರ ಮುಖವಾಡ ಕಳಚಿ ಕಾನೂನಿನ ಕುಣಿಕೆ ಬಿಗಿಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕ್ರಮ ಕೈಗೊಳ್ಳದೇ ಹೋದರೆ ಇಡೀ ಸರ್ಕಾರ ಈ ಹಗರಣದ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ ಎಂಬ ನೈತಿಕ ಪ್ರಜ್ಞೆ ಮುಖ್ಯಮಂತ್ರಿಗಳಿಗಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದಿನ ಹಗರಣಗಳಂತೆ ಈ ಪ್ರಕರಣದಲ್ಲೂ ಸರ್ಕಾರ ಭ್ರಷ್ಟರನ್ನು ರಕ್ಷಿಸಲು ಮುಂದಾದರೆ ಸದ್ಯ ಸಿಬಿಐ ತನಿಖೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಸರ್ಕಾರ ಮುಖಭಂಗಕ್ಕೀಡಾಗುವುದಂತೂ ಖಚಿತ. ಚಿನ್ನ ಕಳ್ಳ ಸಾಗಣೆ ಕೇವಲ ನಟಿಯೊಬ್ಬರನ್ನು ಮಾತ್ರ ಸುತ್ತುವರೆದಿಲ್ಲ , ಇದರ ವ್ಯೂಹದಲ್ಲಿ ಬಹುದೊಡ್ಡ ಜಾಲ ಕೆಲಸ ಮಾಡುತ್ತಿರುವುದು ಈಗಾಗಲೇ ತನಿಖೆಯಿಂದ ಹೊರಬರುತ್ತಿದೆ ಎಂದು ಹೇಳಿದ್ದಾರೆ.
ಒಂದೇ ದಿನದಲ್ಲಿ 12.36 ಕೋಟಿ ಮೌಲ್ಯದ ಚಿನ್ನ ಸಾಗಾಣಿಕೆ ಮಾಡಿ ಸಿಕ್ಕಿ ಬಿದ್ದಿರುವ ರನ್ಯಾ ರಾವ್ ಅವರು ಈವರೆವಿಗೂ ಅದೆಷ್ಟು ಕೋಟಿ ಮೌಲ್ಯದ ಚಿನ್ನ ಕಳ್ಳ ಸಾಗಣೆ ಮಾಡಿರಬಹುದು? ಇದೇ ರೀತಿಯಲ್ಲಿ ಇನ್ನೆಷ್ಟು ಮಂದಿ ಈ ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ಆಳವಾಗಿ ತನಿಖೆ ನಡೆಯಬೇಕಿದೆ. ಸಿಬಿಐ ತನಿಖೆ ಕೈಗೊಂಡಿರುವುದರಿಂದ ಈ ತನಿಖೆ ತಾರ್ಕಿಕ ಅಂತ್ಯ ತಲುಪಲಿದೆ ಎಂಬ ವಿಶ್ವಾಸ ಜನತೆಯದ್ದಾಗಿದೆ ಎಂದು ತಿಳಿಸಿದ್ದಾರೆ.





