Mysore
28
scattered clouds

Social Media

ಗುರುವಾರ, 05 ಡಿಸೆಂಬರ್ 2024
Light
Dark

ಸರ್ಕಾರ ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಪ್ರಕರಣವನ್ನು ವಿವಾದವಾಗಿ ಸೃಷ್ಠಿಸಲು ಪ್ರಯತ್ನ: ಬಿ.ವೈ.ವಿಜಯೇಂದ್ರ

ಬೆಂಗಳೂರು: ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿರುವುದನ್ನು ನೋಡಿದರೆ, ಸರ್ಕಾರ ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಪ್ರಕರಣವನ್ನು ವಿವಾದವನ್ನಾಗಿ  ಸೃಷ್ಠಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಯವರು ತಮ್ಮ ಹೇಳಿಕೆಯ ಕುರಿತಂತೆ ಸೌಹಾರ್ದತೆಯನ್ನು ಪುಷ್ಠೀಕರಿಸಿ ಸೂಕ್ತ ಸ್ಪಷ್ಟನೆ ನೀಡಿ ವಿವಾದಕ್ಕೆ ಇತಿಶ್ರೀ ಹಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಕರಣವನ್ನು ಇಷ್ಟಕ್ಕೇ ಕೈ ಬಿಡಬಹುದಾಗಿದ್ದ ಸರ್ಕಾರ ಸ್ವಾಮೀಜಿಗಳ ವಿರುದ್ಧ ದೂರು ದಾಖಲಾಗುವಂತೆ ನೋಡಿಕೊಂಡು ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನೀಚ ರಾಜಕಾರಣ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ್ರೋಹಿಗಳು, ಸಮಾಜ ಘಾತುಕ ಶಕ್ತಿಗಳ ವಿರುದ್ಧ ಪ್ರಕರಣಗಳನ್ನು ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಬ್ಬ ಸಜ್ಜನಿಕೆಯ ಸಂತರೆಂದು ಕರೆಸಿಕೊಂಡಿರುವ ಹಿರಿಯ ಸ್ವಾಮೀಜಿ ಬಾಯ್ತಪ್ಪಿದ ಮಾತು ಕ್ರಿಮಿನಲ್ ಅಪರಾಧದಂತೆ ಕಂಡಿರುವುದು ವಿಪರ್ಯಾಸವೆನಿಸುತ್ತದೆ ಎಂದು ಹೇಳಿದ್ದಾರೆ.

ಸ್ವಾಮೀಜಿಯವರು ತಾವು ಆಡಿದ ಮಾತುಗಳ ಕುರಿತು ಸೂಕ್ತ ಸ್ಪಷ್ಟನೆ ನೀಡಿ ಮುಸ್ಲಿಂ ಸಮುದಾಯದೊಂದಿಗಿನ ತಮ್ಮ ಬಾಂಧವ್ಯದ ಕುರಿತು ವಿವರಣೆ ನೀಡಿರುವಾಗ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ಪ್ರಕರಣಗಳನ್ನೂ ದೊಡ್ಡ ವಿವಾದವನ್ನಾಗಿಸಲು ಹೊರಟು ಜನರ ದಿಕ್ಕು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗಾಗಿ ಚಂದ್ರಶೇಖರನಾಥ ಸ್ವಾಮೀಜಿ ನೋಟೀಸ್ ನೀಡಿ ವಿಚಾರಣೆಗೆ ಕರೆದಿರುವ ಈ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Tags: