ಬೆಂಗಳೂರು: ಪಕ್ಷದಲ್ಲಿ ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಜನವರಿ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಟಾರ್ಗೆಟ್ ಮಾಡೋರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನನ್ನು ಟಾರ್ಗೆಟ್ ಮಾಡೋರು ಮಾಡಿಕೊಳ್ಳಲಿ, ನಾನು ಕೆಲಸ ಮಾಡಲು ಬಂದಿದ್ದೇನೆ. ಪಕ್ಷದಲ್ಲಿ ಶಾಸಕರು ಕೆಲಸ ಮಾಡಲು ಬಂದಿರೋರು, ಕೆಲಸ ಮಾಡಿಕೊಂಡು ಹೋಗುತ್ತಾರೆ. ಆದರೆ ಕೆಲಸ ಇಲ್ಲದೇ ಇರೋರು ಹೀಗೆಲ್ಲಾ ಮಾತನಾಡುತ್ತಾರೆ. ಮಾತನಾಡುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ವಿರುದ್ಧ ಯಾರು ಕ್ರಮ ಕೈಗೊಳ್ಳಬೇಕೋ ಅವರೇ ತೆಗೆದುಕೊಳ್ಳುತ್ತಾರೆ. ಇನ್ನೂ ಫೆಬ್ರವರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಆದರೆ ಪಕ್ಷದ ಇಂದಿನ ಬೆಳವಣಿಗೆಗೆಗಳ ಕುರಿತು ಕಾರ್ಯಕರ್ತರಿಗೆ ನೋವು ತಂದಿದೆ. ಆ ನೋವು ಏನೆಂದು ನನಗೆ ಅರ್ಥವಾಗುತ್ತದೆ. ಅಲ್ಲದೇ ಇದೆಲ್ಲದಕ್ಕೂ ಇತಿಶ್ರೀ ಹಾಡೋ ಕೆಲಸವನ್ನು ಹೈಕಮಾಂಡ್ ಮಾಡಲಿದೆ ಎಂದು ಹೇಳಿದರು.