ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು 150 ಕೋಟಿ ರೂ ಆಮಿಷ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಿಬಿಐ, ಇಡಿ ತನಿಖೆಗಳಿಗೆ ಬೆಚ್ಚಿ ಬಿದ್ದಿರುವ ನೀವು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಘಟಾನುಘಟಿ ಹಿರಿಯ ವಕೀಲರನ್ನು ಕರೆಸಿಕೊಂಡು ಕಾನೂನು ರಕ್ಷಣೆ ಪಡೆಯಲು ವ್ಯರ್ಥ ಪ್ರಯತ್ನ ನಡೆಸಿದ್ದೀರಿ. ಉಚ್ಛ ನ್ಯಾಯಾಲಯದ ತೀರ್ಪಿನಿಂದ ಮುಖಭಂಗಕ್ಕೀಡಾದ ನಿಮಗೆ ಇನ್ನೊಬ್ಬರ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.
ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿರುವುದು ಕಾಂಗ್ರೆಸ್ಸಿಗರು ಆಕ್ರಮಿಸಿರುವ ವಕ್ಫ್ ಆಸ್ತಿಗಳ ಕುರಿತೇ ಹೊರತು ಬಿಜೆಪಿಯವರನ್ನು ಕುರಿತು ಅಲ್ಲ. ಕಾಂಗ್ರೆಸ್ಸಿಗರ ವಿರುದ್ಧ ಇರುವ ಆರೋಪಕ್ಕೆ ಯಾರಾದರೂ 150 ಕೋಟಿ ರೂಪಾಯಿಗಳ ಆಮಿಷವನ್ನು ಒಡ್ಡಲು ಸಾಧ್ಯವೇ? ಈ ಬಗ್ಗೆ ಸಿಎಂ ಸಿದ್ದರಾಮಯ್ಯರಿಗೆ ಕನಿಷ್ಠ ವಿವೇಕವೂ ಇಲ್ಲವಲ್ಲ ಎಂದು ಲೇವಡಿ ಮಾಡಿದ್ದಾರೆ.
ನಿಮ್ಮ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರು ಹಾಗೂ ಹಿಂದೂ ಧಾರ್ಮಿಕ ಸ್ಥಳಗಳನ್ನು ಕಬಳಿಸಲು ಹೊರಟಿರುವ ಪ್ರಕರಣ, ಪಂಚಮಸಾಲಿ ಮೀಸಲಾತಿಯ ಹೋರಾಟಗಾರರ ಮೇಲೆ ಅಮಾನುಷವಾಗಿ ನಡೆದ ಪೊಲೀಸ್ ದಬ್ಬಾಳಿಕೆಯ ಲಾಠಿ ಚಾರ್ಜ್ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಘಟನೆಯನ್ನು ಹಾಗೂ ಬಾಣಂತಿಯರ ಸರಣಿ ಸಾವಿನ ಪ್ರಕರಣ, ದಿನವೂ ಸರಣಿ ರೂಪದಲ್ಲಿ ಹೊರಬರುತ್ತಿರುವ ಮುಡಾದ ಹಗರಣ ಗಂಭೀರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಚರ್ಚೆಯನ್ನು ದಿಕ್ಕುತಪ್ಪಿಸಲು ಹಾಗೂ ರಾಜ್ಯದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕ್ಷುಲ್ಲಕ ಕಪೋಲಕಲ್ಪಿತ ವಿಷಯವನ್ನು ರಂಧ್ರ ಪೂರಿತ ದೋಣಿಯಂತೆ ತೇಲಿಬಿಟ್ಟಿರುವುದು ನಿಮ್ಮ ರಾಜಕೀಯ ಪ್ರಬುದ್ಧತೆಗೆ ತುಕ್ಕು ಹಿಡಿದಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.





