ಬೆಂಗಳೂರು: ಮುಡಾ ಪ್ರಕರಣದಲ್ಲಿ ತಂಬಾ ಭಯಭೀತರಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಕಾರ್ಯಕರ್ತ ಹಾಗೂ ಈ ಪ್ರಕರಣದ ರೂವಾರಿ ಸ್ನೇಹಮಯಿ ಕೃಷ್ಣರನ್ನು ಎದುರಿಸಲು ಅವರ ಹಿಂಬಾಲಕರ ಮೂಲಕ ಸುಳ್ಳು ದೂರುಗಳನ್ನು ಕೊಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಕಾಂಗ್ರೆಸ್ ಮುಖಂಡರ ಮೂಲಕ ದೂರು ದಾಖಲಿಸಿರುವ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಂದ ಕಾನೂನಾತ್ಮಕವಾಗಿ ನ್ಯಾಯದ ದಾರಿಯಲ್ಲಿ ಹೋರಾಡುತ್ತಿರುವ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಬಲ ಪ್ರಯೋಗಿಸಿ ಸುಳ್ಳು ದೂರುಗಳನ್ನು ದಾಖಲಿಸಿ ದೂರುದಾರರನ್ನು ಬೆದರಿಸುವುದು ಹಾಗೂ ದೇಶದ ಪ್ರಜೆಯ ಹೋರಾಟದ ಹಕ್ಕನ್ನು ದಮನ ಮಾಡುವುದು ಕಾಂಗ್ರೆಸ್‌ನವರ ಕೆಲಸವಾಗಿದೆ. ಇದು ಮುಂದುವರೆದಲ್ಲಿ ಬಿಜೆಪಿ ಅವರ ರಕ್ಷಣೆಗೆ ನಿಲ್ಲುತ್ತದೆ ಎಂದು ಧೈರ್ಯ ಹೇಳಿದ್ದಾರೆ.