ಬೆಂಗಳೂರು: ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಸರ್ಕಾರ ಮಾಡಿದ ಬೆಳೆಹಾನಿ ಜಂಟಿ ಸಮೀಕ್ಷೆ ಹಾಗೂ ಪರಿಹಾರ ವಿವರಗಳ ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಈವರೆಗೂ ಬಿಡುಗಡೆಯಾದ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಪ್ರದೇಶಗಳು ಜಲಾವೃತಗೊಂಡು ಸುಮಾರು 5.29 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆ ನಷ್ಟವಾಯಿತು.
ಇದನ್ನು ಓದಿ : ಬೆಳೆಹಾನಿ ಜಂಟಿಸಮೀಕ್ಷೆಗೆ ಸೂಚನೆ, ವರದಿ ನಂತರ ಪರಿಹಾರ ವಿತರಣೆ ಎಂದ ಸಿಎಂ ಸಿದ್ದರಾಮಯ್ಯ
ಬೆಳೆ ಹಾನಿಗೊಂಡ ಜಿಲ್ಲೆಗಳು ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಗೆ ಸಿದ್ಧವಾಗಿದ್ದವು. ತದನಂತರ ಸೆಪ್ಟೆಂಬರ್ ಮಾಹೆಯ ಅಂತ್ಯದಲ್ಲಿ ಸುರಿದ ಭಾರೀ ಮಳೆಯಿಂದ ಉತ್ತರ ಒಳನಾಡಿನ ಭೀಮಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ನದಿ ಪ್ರವಾಹ ಉಂಟಾಗಿ ಈ ಭಾಗದ ಜಿಲ್ಲೆಗಳಾದ ಕಲಬುರ್ಗಿ, ಯಾದಗಿರಿ, ಬೀದರ್ ಹಾಗೂ ವಿಜಯಪುರ 4 ಜಿಲ್ಲೆಗಳಲ್ಲಿ ಸುಮಾರು 7.24 ಲಕ್ಷ ಹೆಕ್ಟೇರ್ ಬೆಳೆ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಈ ನಾಲ್ಕು ಜಿಲ್ಲೆಗಳಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಮತ್ತೆ ಮಾಡಬೇಕಾದ ಅಗತ್ಯವಿದ್ದು, ಬೆಳೆ ಹಾನಿ ಪ್ರದೇಶವು ಪರಿಷ್ಕರಣೆಗೊಳ್ಳಲಿದೆ. ಜಂಟಿ ಸಮೀಕ್ಷೆಯು ಸುಮಾರು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಒಟ್ಟಾರೆಯಾಗಿ 2025 ನೈಋತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.





