ಬೆಂಗಳೂರು: ಅಂಧ್ರ ಪ್ರದೇಶ ಸರ್ಕಾರವು ಶಕ್ತಿ ಯೋಜನೆಯನ್ನು ತಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಂದು ಆಂಧ್ರ ಸರ್ಕಾರ ನಿಯೋಗ ಬೆಂಗಳೂರಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.
ಚುನಾವಣೆ ವೇಳೆ ನೀಡಿದ ಭರವಸೆಯಂತೆ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಶಕ್ತಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಪಡೆಯುವ ನಿಟ್ಟಿನಲ್ಲಿ ಆಂಧ್ರದ ಗೃಹ ಸಚಿವೆ ಅನಿತಾ, ಸಾರಿಗೆ ಸಚಿವ ರಾಮಮೋಹನ್ ರೆಡ್ಡಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸಂಧ್ಯಾರಾಣಿ ಒಳಗೊಂಡ ನಿಯೋಗ ಇಂದು ಬೆಂಗಳೂರಿಗೆ ಆಗಮಿಸಿತ್ತು.
ಶಕ್ತಿ ಯೋಜನೆ ಸಂಬಂಧ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಯೋಜನೆಯಿಂದ ಎಷ್ಟು ಉಪಯೋಗವಾಗಿದೆ? ಹೇಗೆ ಉಪಯೋಗವಾಗಿದೆ ಎಂಬುದರ ಪ್ರಶ್ನೆಗೆ ಮಹಿಳಾ ಪ್ರಯಾಣಿಕರು ಉತ್ತರಿಸಿ ಶಕ್ತಿ ಯೋಜನೆಯಿಂದ ನಮಗೆಲ್ಲಾ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಳಿಕ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡ ನಿಯೋಗ ಶಕ್ತಿ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿತು.