ಬೆಂಗಳೂರು: ಕಂದಾಯ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು, ಆ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಬೈರೇಗೌಡರ ವಿರುದ್ಧ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪದಡಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ರಾಜ್ಯಪಾಲರಿಗೆ ದೂರು ನೀಡಿದ್ದು, ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುತ್ತಿಲ್ಲ. ಸಚಿವರೇ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಸಚಿವರ ವಿರುದ್ಧ ಕ್ರಮವಹಿಸಿ ಅವರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕಂದಾಯ ಇಲಾಖೆಯಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮಕ್ಕೆ ಸರ್ಕಾರ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ದೊಡ್ಡಬಳ್ಳಾಪುರ ಹುಲಿಕುಂಟೆ ಗ್ರಾಮದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ವೇ ನಂಬರ್ 150ರಲ್ಲಿರುವ ಜಮೀನನ್ನು ಪೋಡಿ ಮಾಡದೇ ಹಾಗೂ ನಕ್ಷೆ ತಯಾರಿಸದೇ ಸಾಗುವಳಿದಾರರು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ. ಅಲ್ಲದೇ ಪಲ್ಟಿತ್ ಡೆವಲಪರ್ಸ್ ಎಲ್‌ಎಲ್‌ಪಿ ಕಂಪೆನಿಗೆ ಮಾರಾಟ ಮಾಡಿದ್ದು, ತಹಶೀಲ್ದಾರ ಮತ್ತು ಉಪ ವಿಭಾಗಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.