Mysore
21
overcast clouds
Light
Dark

ನಗರದ ವಿವಿಧ ಸ್ಥಳಗಳಲ್ಲಿ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಾಣಕ್ಕೆ ಸೂಚನೆ: ಸಿದ್ದರಾಮಯ್ಯ

ಬೆಂಗಳೂರು: ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸುವಂತೆ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ಅವರು ಇಂದು (ಆಗಸ್ಟ್ 25) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯನಗರ ಬಸ್/ಮೆಟ್ರೊ ನಿಲ್ದಾಣದ ಬಳಿ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಹವಾನಿಯಂತ್ರಿತ ಮಾರುಕಟ್ಟೆ ಕೃಷ್ಣದೇವರಾಯ ಪಾಲಿಕೆ ಬಜಾರ್ ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬೀದಿವ್ಯಾಪರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸಲಾಗಿದ್ದು, ಇಲ್ಲಿ 79 ಮಳಿಗೆಗಳಿವೆ. ದಕ್ಷಿಣ ಭಾರತದಲ್ಲಿಯೇ ಇಂತಹ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿತವಾಗಿರುವುದು ಇದೇ ಮೊದಲು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಅವರಿಗೆ ಗೌರವ ಸೂಚಿಸುವಂತೆ ಬಜಾರ್ ನ್ನು ಕೃಷ್ಣದೇವರಾಯ ಪಾಲಿಕೆ ಎಂದು ನಾಮಕರಣ ಮಾಡಿರುವುದು ಶ್ಲಾಘನೀಯ ಎಂದರು.ಪಾಲಿಕೆ ಬಜಾರ್ ಸರ್ಕಾರದ ಜನಪರ ಚಿಂತನೆಯ ಯೋಜನೆ. ಇಂದು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಂತಹ ಬಜಾರ್ಗಳು ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ವಿಶೇಷವಾಗಿ ಗಾಂಧಿಬಜಾರ್ ನಂತಹ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸುವ ಅಗತ್ಯವಿದೆ ಎಂದರು.

ವಿಜಯನಗರ ನನಗೆ ಚಿರಪರಿಚಿತ: ತಾನು ಈ ಹಿಂದೆಯೂ ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ನೆನಪನ್ನು ಮೆಲಕು ಹಾಕಿದ ಮುಖ್ಯಮಂತ್ರಿಗಳು , ಈ ಪ್ರದೇಶ ನನಗೆ ಬಹಳ ಚಿರಪರಿಚಿತವಾಗಿದೆ ಎಂದರು. ವ್ಯಾಪಾರಿಗಳ ಪರಿಸ್ಥಿತಿಯನ್ನು ಆಗನಿಂದಲೇ ಗಮನಿಸಿದ್ದ ನನಗೆ, ಶಾಸಕ ಕೃಷ್ಣಪ್ಪನವರ ಬೇಡಿಕೆ ಸಮಂಜಸವಾಗಿದೆ ಎನ್ನಿಸಿತ್ತು ಎಂದು ತಿಳಿಸಿದರು.

ಎಂ.ಕೃಷ್ಣಪ್ಪ ಅವರ ಕನಸಿನ ಯೋಜನೆ: ವಿಜಯನಗರ ವಿಧಾನಸಭಾಕ್ಷೇತ್ರದಲ್ಲಿ ಕೃಷ್ಣದೇವರಾಯ ಪಾಲಿಕೆ ಬಜಾರ್ ಯೋಜನೆ ಇಲ್ಲಿನ ಶಾಸಕರಾದ ಎಂ.ಕೃಷ್ಣಪ್ಪ ಅವರ ಕನಸು. ಇಲ್ಲಿನ ಬೀದಿವ್ಯಾಪಾರಿಗಳು ಬಿಸಿಲು ಗಾಳಿ ಮಳೆಯಲ್ಲಿ ವ್ಯಾಪಾರ ಮಾಡಬೇಕಾಗಿದ್ದು, ಅವರಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಮಾಡಿಕೊಡಲು ಬೇಡಿಕೆಯಿರಿಸಿದ್ದರು. ನಾನು 2017 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ , ಪಾಲಿಕೆ ಬಜಾರ್ ಗಳ ನಿರ್ಮಾಣಕ್ಕೆ 5 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದ್ದು, ಇಂದು ನಾನೇ ಈ ಬಜಾರ್ ನ್ನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಬೆಂಗಳೂರು ನಗರ ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಬಸ್ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣವಿರುವ ಸೂಕ್ತ ಸ್ಥಳದಲ್ಲಿ ಪಾಲಿಕೆ ಬಜಾರ್ ನಿರ್ಮಾಣವಾಗಿದೆ. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ. ಒಂದೇ ಕಡೆ ಎಲ್ಲಾ ವ್ಯಾಪಾರ ಮಾಡುವವರಿಗೆ ವ್ಯವಸ್ಥೆ ಕಲ್ಪಿಸಿದ್ದು, ನಾಗರಿಕರಿಗೆ ಅನುಕೂಲವಾಗಲಿದೆ ಎಂದರು.

ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ: ಅಭಿವೃದ್ಧಿ ಯೋಜನೆಗಳಿಗೆ 1 ಲಕ್ಷದ 60 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಂಜೂರು ಮಾಡಿದ್ದೇವೆ. ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಬ್ರಾಂಡ್ ಬೆಂಗಳೂರು ಮಾಡುವುದು ನಮ್ಮ ಉದ್ದೇಶ. ಆ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಪಾಲಿಕೆ ಬಜಾರ್: ಬೆಂಗಳೂರು ನಗರಕ್ಕೆ ಭೂಷಣ: ಬೆಂಗಳೂರು ನಗರಕ್ಕೆ ಪಾಲಿಕೆ ಬಜಾರ್ ಭೂಷಣ.ಶಾಸಕ ಕೃಷ್ಣಪ್ಪ ಜನಪರ ಕಾಳಜಿ ಇಟ್ಟುಕೊಂಡಿದ್ದಾರೆ. ಕೃಷ್ಣಪ್ಪ ಅವರು ಕಾಂಗ್ರೆಸ್ ನ ಹಿರಿಯ ನಾಯಕರು ಅವರನ್ನು ನಮ್ಮ ಪಕ್ಷ ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದರು.