ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವೂ ಅಭಿವೃದ್ಧಿಪಡಿಸಿದ ವಿವಿಧ ತಾಂತ್ರಿಕತೆಗಳ ಉತ್ಪನ್ನ ಹಾಗೂ ಕೃಷಿ ಪರಿಕರಗಳ ʼಕೃಷಿ ವಿಶ್ವವಿದ್ಯಾನಿಲಯ ಉತ್ಪನ್ನಗಳ ಸಂತೆ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದು(ಜೂ.22) ಚಾಲನೆ ನೀಡಿದರು.
ಕೃಷಿ ವಿವಿಯ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ಈ ವಿನೂತನ ಸಂತೆಯಲ್ಲಿ, ಬೆಂಗಳೂರು ಕೃಷಿ ವಿವಿಯ ವ್ಯಾಪ್ತಿಗೊಳಪಡುವ ವಿವಿಧ ಕೃಷಿ ಸಂಶೋಧನಾ ವಿಸ್ತರಣಾ ಹಾಗೂ ಕೃಷಿ ಮಹಾವಿದ್ಯಾಲಯಗಳಲ್ಲಿ ಸಂಶೋಧನೆಗೊಳಪಟ್ಟು ಉತ್ಪಾದಿಸಲಾದ ಕೃಷಿ ಉತ್ಪನ್ನಗಳು ಹಾಗೂ ಕೃಷಿ ತಂತ್ರಜ್ಞಾನಗಳನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಸಂತೆಯನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂತೆಯಲ್ಲಿ ಬಿತ್ತನೆ ಬೀಜಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ವಿವಿಧ ಸಸ್ಯಾಭಿವೃದ್ದಿ ಸಾಮಾಗ್ರಿಗಳು, ಜೈವಿಕ ಗೊಬ್ಬರಗಳು, ಜೇನು ಕೃಷಿ, ಕೇಕ್ ಪ್ರದರ್ಶನ ಸೇರಿದಂತೆ ಇನ್ನೂ ಮುಂತಾದವುಗಳನ್ನು ಈ ಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಕೆವಿಕೆ ಉಪ ಕುಲಪತಿ ಸುರೇಶ್, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.