ಪ್ರಜ್ವಲ್‌ ರೇವಣ್ಣ ಬೆನ್ನಲ್ಲೇ ಅಣ್ಣ ಸೂರಜ್‌ ರೇವಣ್ಣ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜೈಲುಪಾಲಾಗಿದ್ದಾರೆ. ಈ ಬೆನ್ನಲ್ಲೇ ಅವರ ಅಣ್ಣ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಪ್ರಜ್ವಲ್‌ ರೇವಣ್ಣ ಅವರ ಅಣ್ಣ ಸೂರಜ್‌ ರೇವಣ್ಣ ಅವರ ವಿರುದ್ಧವೂ ಸಹ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದ್ದು, ಅರಕಲಗೂಡು ಜೆಡಿಎಸ್‌ ಕಾರ್ಯಕರ್ತನ ಮೇಲೆ ಸೂರಜ್‌ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಜೆಡಿಎಸ್‌ ಕಾರ್ಯಕರ್ತ ಎನ್ನಲಾದ ವ್ಯಕ್ತಿ, ಮುಖ್ಯಮಂತ್ರಿ, ಗೃಹಸಚಿವರು, ಡಿಜಿ ಮತ್ತು ಐಜಿಪಿ ಹಾಗೂ ಹಾಸನ ಎಸ್ಪಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸೂರಜ್‌ ರೇವಣ್ಣ ಅವರು ಜೂನ್‌ 16 ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನಿಗೆ ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಸಿಕೊಂಡು ಬಲವಂತವಾಗಿ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.