ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್ , ಪವಿತ್ರಾ ಗೌಡ ಸೇರಿ ಇತರ ಆರೋಪಿಗಳು ಈಗಾಗಲೇ ಜೈಲು ಪಾಲಾಗಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಸಹ ಚುರುಕುಗೊಳಿಸಿದ್ದು, ದರ್ಶನ್ ವಿರುದ್ಧ ೩೦ಕ್ಕೂ ಹೆಚ್ಚು ಸಾಕ್ಷ್ಯಗಳು ಸಿಕ್ಕಿವೆ ಎಂದು ವರದಿ ಕೂಡ ಆಗಿದೆ.
ನಟ ದರ್ಶನ್ ಪರಪ್ಪನ ಅಗ್ರಹಾರದ ಜೈಲು ಸೇರುತ್ತಿದ್ದಂತೆ ಪ್ರತಿದಿನವೂ ಕೂಡ ಅಭಿಮಾನಿಗಳು ಜೈಲಿನ ಬಳಿ ಬಂದು ದರ್ಶನ್ ನೋಡಬೇಕು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡುತ್ತಿದ್ದಾರೆ. ಮಹಿಳೆಯರು, ವಿಶೇಷ ಚೇತನರು ಸೇರಿದಂತೆ ಇತರ ಅಭಿಮಾನಿಗಳು ಜೈಲಿನ ಬಳಿ ಬಂದು ಬೀಡುಬಿಟ್ಟಿದ್ದು, ಇದೀಗ ಈ ವಿಚಾರವಾಗಿ ನಟ ದರ್ಶನ್ ಅವರೇ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ.
ಜೈಲಾಧಿಕಾರಿಗಳ ಮೂಲಕ ಮನವಿ ಮಾಡಿರುವ ದರ್ಶನ್ , ʻಯಾರೂ ಕೂಡ ಜೈಲಿನ ಬಳಿ ಬರಬೇಡಿ , ಜೈಲಿನ ಬಳಿ ಬಂದು ನನ್ನ ಭೇಟಿಗೆ ಕಾಯುವುದು, ನನ್ನನ್ನ ಭೇಟಿ ಮಾಡಲು ಸಾಧ್ಯವಾಗದೆ ನಿರಾಸೆಯಿಂದ ವಾಪಸ್ ಹೋಗುವುದು ಬೇಡ. ದಯಮಾಡಿ ಯಾರು ಜೈಲಿನ ಬಳಿ ಬಂದು ಸಮಯ ವ್ಯರ್ಥ ಮಾಡಿಕೊಳ್ಳಬೇಡಿʼ ಎಂದು ಕೋರಿದ್ದಾರೆ.