ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ ಡಾಲಿ ಧನಂಜಯ್ ಅವರು 2025ರ ಫೆಬ್ರವರಿ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ರಾಜಕೀಯ ಗಣ್ಯರಿಗೆ ನೀಡುತ್ತಿದ್ದು, ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮದುವೆ ಆಮಂತ್ರಣ ಪತ್ರಿಕೆ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಧನ್ಯತಾ ಅವರು, ಮದುವೆ ಆಮಂತ್ರಣ ನೀಡಿ ಮದುವೆಗೆ ಬರುವಂತೆ ಮನವಿ ಮಾಡಿದರು. ಎಚ್.ಡಿ.ದೇವೇಗೌಡ ಅವರು ವಯಸ್ಸಿನಲ್ಲಿ ಬಹಳ ಹಿರಿಯರಾದ ಕಾರಣ ಅವರನ್ನು ಮದುವೆಗೆ ಬರುವಂತೆ ಕೋರಿದರು.
ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸಹ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ್ದರು.
ಇನ್ನು ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಧನ್ಯತಾ ಜೊತೆ ಡಾಲಿ ಧನಂಜಯ್ ಹಸೆಮಣೆ ಏರುತ್ತಿದ್ದು, ಫೆಬ್ರವರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮದುವೆ ನಡೆಯಲಿದೆ.
ಅಂದು ಹಿರಿಯರ ಸಮ್ಮುಖದಲ್ಲಿ ವಿವಾಹ ನೆರವೇರಲಿದ್ದು, ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





