Mysore
22
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ದೆಹಲಿಗೆ 8 ಸಾವಿರ ಡಚ್ ಮ್ಯಾಟ್‌ ರವಾನೆ: ಸಿಎಂ ಸಿದ್ದರಾಮಯ್ಯ ಹಸಿರು ನಿಶಾನೆ

ಬೆಂಗಳೂರು: ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ ಸುಮಾರು 8,000 ಡಚ್ ಮ್ಯಾಟ್‌ಗಳನ್ನು ದೆಹಲಿಗೆ ಸರಬರಾಜು ಮಾಡಲು ಸಿದ್ಧಪಡಿಸಲಾಗಿದ್ದು, ಈ ಮ್ಯಾಟ್‌ಗಳ ಸಾಗಣೆ ವಾಹನಕ್ಕೆ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಹಸಿರು ನಿಶಾನೆ” ತೋರಿಸಿ ಚಾಲನೆ ನೀಡಿದರು. ಕಾರ್ಯಕ್ರಮವು ಮುಖ್ಯಮಂತ್ರಿ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನೆರವೇರಿತು.

ತೆಂಗಿನ ನಾರಿನ ಉತ್ಪನ್ನಗಳಲ್ಲಿ ವಿಶೇಷ ಸ್ಥಾನ ಪಡೆದಿರುವ “ಡಚ್ ಮ್ಯಾಟ್”ಗಳು ತಮ್ಮ ಬಲಿಷ್ಠತೆ, ದೀರ್ಘಕಾಲಿಕತೆ ಮತ್ತು ಪರಿಸರ ಸ್ನೇಹಿ ಗುಣಗಳಿಂದ ದೇಶಾದ್ಯಂತ ಬೇಡಿಕೆ ಗಳಿಸಿವೆ. ವಿಶೇಷವಾಗಿ ಉಪ ಹಿಮಾಲಯ ರಾಜ್ಯಗಳಲ್ಲಿ ಈ ಮ್ಯಾಟ್‌ಗಳಿಗೆ ಹೆಚ್ಚು ಮಾರುಕಟ್ಟೆ ಇದೆ.

ತೆಂಗಿನ ತೊಗಟೆ ಸಂಗ್ರಹದಿಂದ ಪ್ರಾರಂಭವಾಗುವ ಈ ಪ್ರಕ್ರಿಯೆಯಲ್ಲಿ, ಬಸ್ಟರ್ ಯಂತ್ರದಲ್ಲಿ ಮೃದುಗೊಳಿಸಿದ ತೊಗಟೆಯನ್ನು ಕನಿಷ್ಠ 7 ದಿನಗಳ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಬಳಿಕ ನಾರುಗಳನ್ನು ಬೇರ್ಪಡಿಸಿ, ಅವುಗಳನ್ನು 2 ಪ್ಲೈ ಯಂತ್ರದಲ್ಲಿ ಹುರಿ ರೂಪಕ್ಕೆ ತಂದು, ಬಣ್ಣ ಹಚ್ಚಲಾಗುತ್ತದೆ. ನಂತರ ಹಸ್ತಚಾಲಿತ ಫ್ರೇಮ್‌ಗಳ ಮೂಲಕ ಮ್ಯಾಟ್‌ಗಳನ್ನು ಹೆಣೆದು, ಪ್ರೆಸಿಂಗ್ ಮೂಲಕ ಬಿಗಿಗೊಳಿಸಿ ಅಂತಿಮ ಉತ್ಪನ್ನವನ್ನು ಸಿದ್ಧಪಡಿಸಲಾಗುತ್ತದೆ. ಸಾಮಾನ್ಯವಾಗಿ 14×24 ಇಂಚಿನ ಡಚ್ ಮ್ಯಾಟ್‌ಗಳು ಸುಮಾರು 900 ಗ್ರಾಂ ತೂಕವಿದ್ದು, ಕಾರಿಡಾರ್ ಮ್ಯಾಟ್‌ಗಳು 1060 ಗ್ರಾಂ ತೂಕ ಹೊಂದಿರುತ್ತವೆ.

ನಿಗಮದ 35 ಉತ್ಪಾದನಾ ಘಟಕಗಳ ಮೂಲಕ, ಮುಖ್ಯಮಂತ್ರಿ ಆಶಯದಂತೆ ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರ ಮಾರ್ಗದರ್ಶನದಲ್ಲಿ, ನಿಗಮದ ಅಧ್ಯಕ್ಷ ನಟರಾಜ್ ಜಾನಕಿರಾಮ್ ಅವರ ಮುಂದಾಳತ್ವದಲ್ಲಿ ಸುಮಾರು 700 ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಈ ಯೋಜನೆಯ ಮೂಲಕ ಸ್ಥಳೀಯ ಸಂಪನ್ಮೂಲಗಳ ಸದುಪಯೋಗದ ಜೊತೆಗೆ, ಗ್ರಾಮೀಣ ಆರ್ಥಿಕತೆಗೆ ಬಲ ತುಂಬುವ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಎನ್ ಶಿವಪ್ರಕಾಶ್ ಅವರು ತಿಳಿಸಿದರು.

 

Tags:
error: Content is protected !!