Mysore
29
scattered clouds

Social Media

ಶನಿವಾರ, 02 ನವೆಂಬರ್ 2024
Light
Dark

ಎಚ್ಎಂಟಿ ವಶದಲ್ಲಿದ್ದ 5 ಎಕರೆ ಅರಣ್ಯ ಭೂಮಿ ಮರುವಶ

ಪೀಣ್ಯ ಪ್ಲಾಂಟೇಷನ್ ನಲ್ಲಿ ಲಾಲ್ ಬಾಗ್ ರೀತಿ ಉದ್ಯಾನ ಮಾಡುವ ಈಶ್ವರ ಖಂಡ್ರೆ ಆಶಯಕ್ಕೆ ಬಲ

ಬೆಂಗಳೂರು: ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನು ವಶಕ್ಕೆ ಪಡೆದು ಬೃಹತ್ ಉದ್ಯಾನ ನಿರ್ಮಿಸುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಆಶಯಕ್ಕೆ ಅಧಿಕಾರಿಗಳು ಇಂದು ಬಲ ನೀಡಿದ್ದಾರೆ.

ಎಚ್ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಇಂದು ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದಿದ್ದು ಅಲ್ಲಿ ಕರ್ನಾಟಕ ಅರಣ್ಯ ಇಲಾಖೆ ಫಲಕವನ್ನು ನೆಟ್ಟು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ.

1896 ಮೇ 29ರ ಸರ್ಕಾರದ ಅಧಿಸೂಚನೆ ಸಂಖ್ಯೆ 10407, ಎಫ್.ಟಿ.ಎಫ್. 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್.ಟಿ.ಎಫ್.-15-1900ರ ರೀತ್ಯ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು once a forest is always a forest ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.

ಸದರಿ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐ.ಎ.) ಹಿಂಪಡೆಯಲೂ ಸೂಚನೆ ನೀಡಿದ್ದರು.

ಈ ಮಧ್ಯೆ ಎಚ್ಎಂಟಿ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯ ಪೈಕಿ 165ಕ್ಕೂ ಹೆಚ್ಚು ಎಕರೆ ಜಮೀನನ್ನು ಕೇವಲ 300 ಕೋಟಿ ರೂಪಾಯಿಗಳಿಗೆ ಖಾಸಗಿ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿತ್ತು.

ಈ ಭೂಮಿಯನ್ನು ವಶಕ್ಕೆ ಪಡೆದು ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಬೃಹತ್ ಉದ್ಯಾನ ಇಲ್ಲದ ಉತ್ತರ ಬೆಂಗಳೂರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಆ ಭಾಗದ ಬೆಂಗಳೂರಿಗರಿಗೆ ಅತ್ಯುತ್ತಮ ಶ್ವಾಸತಾಣ ಮಾಡುವ ಆಶಯವನ್ನು ಈಶ್ವರ ಖಂಡ್ರೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಅಧಿಕಾರಿಗಳು ಪ್ರಥಮ ಹೆಜ್ಜೆ ಇಟ್ಟಿದ್ದಾರೆ.

Tags: