ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ 2000 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮಾ.19 ರಂದು ಯುಗಾದಿ ಹಾಗೂ ಮಾ.21ರಂದು ರಂಜಾನ್ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿಯು ಮಾ. 18ರಿಂದ ಮಾ.20ರವರೆಗೆ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಿದೆ.
ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಮಾ.22 ರಂದು ವಿಶೇಷ ಬಸ್‌ಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಒದಗಿಸಲಾಗುತ್ತದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಬಸ್ ಸೌಲಭ್ಯವಿರಲಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.





