ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಯುವರಾಜ್ ಸಿಂಗ್ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬೆನ್ನಲ್ಲೇ ಯುವರಾಜ್ ಸಿಂಗ್ ಬಿಜೆಪಿ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.
ಪಂಜಾಬ್ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಯುವರಾಜ್ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇವೆಲ್ಲದಕ್ಕೂ ಸ್ಪಷ್ಟನೆ ನೀಡಿರುವ ಯುವರಾಜ್ ಸಿಂಗ್, ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ ಎಂದು ಎಲ್ಲದಕೂ ತೆರೆ ಎಳೆದಿದ್ದಾರೆ.
ನಾನು ಗುರುದಾಸ್‌ಪುರದಿಂದ ಚುನಾವಣೆಗೆ ನಿಲ್ಲುವುದಿಲ್ಲ. ಬದಲಾಗಿ ನನ್ನ YOUWECAN ಫೌಂಡೇಷನ್ ಮೂಲಕ ಜನರನ್ನು ತಲುಪುವ ಕೆಲಸವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
ಆ ಮೂಲಕ ಯುವರಾಜ್ ಸಿಂಗ್ ಅವರ ರಾಜಕೀಯ ಜೀವನ ಕುರಿತಂತೆ ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.





