Mysore
32
broken clouds

Social Media

ಸೋಮವಾರ, 15 ಜೂನ್ 2026
Light
Dark

23 ವರ್ಷ ಬಳಿಕ ಇಂಗ್ಲೆಂಡ್ ವಿರುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಗೆಲುವು

ಕ್ಯಾಂಟರ್ಬರಿ(ಇಂಗ್ಲೆಂಡ್​): ಆಂಗ್ಲರ ನಾಡಲ್ಲಿ ಹರ್ಮನ್​ಪ್ರೀತ್​ ಕೌರ್​ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೊಸ ದಾಖಲೆ ನಿರ್ಮಿಸಿತು. ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 88 ರನ್​​​ಗಳ ಭರ್ಜರಿ ಗೆಲುವಿನೊಂದಿಗೆ 23 ವರ್ಷಗಳ ಬಳಿಕ ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಗೆದ್ದು ಐತಿಹಾಸಿಕ ಸಾಧನೆ ತೋರಿದರು. 

ಇಂಗ್ಲೆಂಡ್​ನ ದಿ ಸ್ಟಿಟ್​ಫೈರ್​​ ಗ್ರೌಂಡ್​ ಸೇಂಟ್​​ ಲಾರೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ ನಿಗದಿತ 50 ಓವರ್​​​​​ಗಳಲ್ಲಿ 5 ವಿಕೆಟ್ ​ನಷ್ಟಕ್ಕೆ 333 ರನ್‌ಗಳ ಬೃಹತ್‌ ಗುರಿ ನೀಡಿತು. ಇನ್ನಿಂಗ್ಸ್‌ ಶುರು ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದ್ರೆ, ನಂತರ ಕ್ರೀಸ್‌ನಲ್ಲಿ ಜತೆಯಾದ ನಾಯಕಿ ಹರ್ಮನ್​ಪ್ರೀತ್​ ಕೌರ್​​ ಅಬ್ಬರದ ಆಟಕ್ಕೆ ಮಂದಾದರು. ಮೈದಾನದ ಉದ್ದಗಲ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಅವರು 143 ರನ್ ಗಳಿಸಿದರೆ, ಹರ್ಲಿನ್ ಡಿಯೋಲ್​​ ​(58) ರನ್​​ ಸೇರಿಸಿ ತಂಡ 300 ರನ್‌ ಗಡಿ ದಾಟುವಂತೆ ಮಾಡಿದರು. ಕೌರ್ ಅಬ್ಬರದ ಆಟದಲ್ಲಿ 18 ಬೌಂಡರಿ, 4 ಸಿಕ್ಸರ್​ ಸೇರಿದ್ದವು. ಇನ್ನು, ಸ್ಮೃತಿ ಮಂದಾನ (40) ರನ್ ಪೇರಿಸಿದರು.

334 ರನ್​​ಗಳ ಸವಾಲಿನ ಟಾರ್ಗೆಟ್‌ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ತಂಡ ಕೇವಲ 12 ರನ್​​​​ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಸೆ (39), ಡೇನಿಲ್ ​​​(65), ಜಾನ್ಸಿ (39) ರನ್​​​ಗಳಿಸಿ ತಂಡವನ್ನು ಗೆಲುವಿನ ದಡದತ್ತ ತೆಗೆದುಕೊಂಡು ಹೋಗುವ ಮುನ್ಸೂಚನೆ ನೀಡಿದರು. ಆದರೆ, ಇವರ ವಿಕೆಟ್ ಕೀಳುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಮಹಿಳೆಯರು ಮೇಲುಗೈ ಸಾಧಿಸಿದರು. ಕೊನೆಯದಾಗಿ, ತಂಡ 44.2 ಓವರ್​​​​​ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 245 ರನ್​​ಗಳಿಸಲು ಮಾತ್ರ ಸಾಧ್ಯವಾಯಿತು. ಹೀಗಾಗಿ, ಆಂಗ್ಲ ಮಹಿಳೆಯರು 88 ರನ್​​​ಗಳ ದೊಡ್ಡ ಅಂತರದ ಸೋಲು ಕಂಡರು.

ಬೌಲರ್ ರೇಣುಕಾ ಸಿಂಗ್​ 4 ವಿಕೆಟ್​​ ಪಡೆದರೆ, ಹೇಮಲತಾ 2, ಶೆಫಾಲಿ ಹಾಗೂ ದೀಪ್ತಿ ಶರ್ಮಾ 1 ವಿಕೆಟ್ ಉರುಳಿಸಿದರು. ಮೊದಲ ಏಕದಿನ ಪಂದ್ಯದಲ್ಲಿಯೂ ಭಾರತೀಯರು ಗೆಲುವು ಸಾಧಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ್ದು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!