ನವದೆಹಲಿ: ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಭಾರೀ ಮಳೆಯೇನೂ ಇಲ್ಲ. ಆದ್ರೆ, ಪ್ರವಾಹ ಮಾತ್ರ ವಿಪರೀತವಾಗಿದೆ. ಯಮುನಾ ನದಿ ಅಬ್ಬರಿಸುತ್ತಿದೆ. ದಿಲ್ಲಿಯ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಈ ಹೊತ್ತಲ್ಲಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಸಾರಥ್ಯದ ಎಎಪಿ ಸರ್ಕಾರದ ವಿರುದ್ಧ ಚಾಟಿ ಬೀಸಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, ದಿಲ್ಲಿ ಜನರೇ ಎದ್ದೇಳಿ, ಯಾವುದೂ ಉಚಿತವಾಗಿ ಸಿಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ‘ದಿಲ್ಲಿ ಜನರೇ ಎದ್ದೇಳಿ, ದಿಲ್ಲಿ ನಗರವು ಚರಂಡಿಯಾಗುತ್ತಿದೆ. ಯಾವುದೂ ಉಚಿತವಾಗಿ ಸಿಗೋದಿಲ್ಲ. ಎಲ್ಲದಕ್ಕೂ ಬೆಲೆ ಕಟ್ಟಬೇಕು’ ಎಂದು ಎಎಪಿಗೆ ಟಾಂಗ್ ಕೊಟ್ಟಿದ್ದಾರೆ. ಹಲವು ಉಚಿತ ಭಾಗ್ಯಗಳನ್ನು ನೀಡಿ ಅಧಿಕಾರಕ್ಕೆ ಬಂದ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಗೌತಮ್ ಗಂಭೀರ್ ಚಾಟಿ ಬೀಸಿದ್ದಾರೆ.
Wake up Delhiites
Delhi has become a gutter
Nothing is for free, this is the PRICE!!— Gautam Gambhir (@GautamGambhir) July 13, 2023
ದಿಲ್ಲಿ ನಗರದಲ್ಲಿ ಭಾರೀ ಮಳೆ ಸುರಿಯದಿದ್ದರೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಯಮುನಾ ನದಿಯ ಪ್ರವಾಹದ ನೀರು ನಗರದ ತುಂಬಾ ವ್ಯಾಪಿಸಿದೆ. ಇದಕ್ಕೆಲ್ಲಾ ಎಎಪಿ ಸರ್ಕಾರದ ದುರಾಡಳಿತವೇ ಕಾರಣ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಯಮುನಾ ನದಿ ಪ್ರವಾಹದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ರೀತಿಯ ಸನ್ನಿವೇಶದಿಂದಾಗಿ ಜನರ ಜೀವಕ್ಕೇ ಆಪತ್ತು ಎದುರಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಇತ್ತ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರವು ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಹಲವು ತುರ್ತು ಕಾರ್ಯಾಚರಣೆಗಳು ನಡೆಯುತ್ತಿವೆ. ಆದರೆ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ನಿವಾಸ, ದಿಲ್ಲಿ ವಿಧಾನಸಭೆ, ವಿಐಪಿಗಳು ಇರುವ ಪ್ರದೇಶ ಸೇರಿದಂತೆ ಹಲವೆಡೆ ಪ್ರವಾಹದ ನೀರು ವ್ಯಾಪಿಸಿದೆ.
ಕಳೆದ ಹಲವು ದಿನಗಳಿಂದ ದಿಲ್ಲಿ ನಗರದಲ್ಲಿ ಭಾರೀ ಮಳೆ ಬಿದ್ದಿಲ್ಲ. ಆದರೆ, ಹರ್ಯಾಣದ ಬ್ಯಾರೇಜ್‌ನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಟ್ಟಿರುವ ಕಾರಣ ದಿಲ್ಲಿ ಮಹಾ ನಗರ ಮುಳುಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೆರವು ಕೇಳಿರುವ ಎಎಪಿ ಸರ್ಕಾರ, ಬ್ಯಾರೇಜ್‌ನಲ್ಲಿ ನೀರು ನಿಲ್ಲಿಸುವಂತೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಉತ್ತರ ಭಾರತದಾದ್ಯಂತ ಭಾರೀ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಹರ್ಯಾಣದ ಬ್ಯಾರೇಜ್ ಭರ್ತಿಯಾಗಿದ್ದು, ಅನಿವಾರ್ಯವಾಗಿ ನೀರನ್ನು ಹೊರಗೆ ಬಿಡಲಾಗುತ್ತಿದೆ.
ರಾಷ್ಟ್ರ ರಾಜಧಾನಿ ದಿಲ್ಲಿ ಮಹಾ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ದಿಲ್ಲಿಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆ ದಿಲ್ಲಿ ಸಿಎಂ ಕೇಜ್ರಿವಾಲ್ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ತುರ್ತಾಗಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತಾಗಿ ಚರ್ಚಿಸಿದ್ದಾರೆ. ದಿಲ್ಲಿಯಲ್ಲಿ ಶಾಲೆ ಹಾಗೂ ಕಾಲೇಜುಗಳು ಕಳೆದ ಭಾನುವಾರದಿಂದ ಬಂದ್ ಆಗಿವೆ. ಸರ್ಕಾರಿ ಕಚೇರಿಗಳೂ ಕೂಡಾ ವರ್ಕ್ ಫ್ರಂ ಹೋಂಗೆ ಬದಲಾಗಿದೆ.