ವಡೋದರಾ: ಇಲ್ಲಿನ ಕೊಟಂಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿದರ್ಭ ತಂಡದ ವಿರುದ್ಧ 36 ರನ್‌ಗಳ ಗೆಲುವನ್ನು ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ವಿದರ್ಭ ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಕಲೆಹಾಕಿ ವಿದರ್ಭ ತಂಡಕ್ಕೆ 349 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ವಿದರ್ಭ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲ್‌ಔಟ್ ಆಯಿತು.
ಕರ್ನಾಟಕ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ 32 ಹಾಗೂ ದೇವದತ್ ಪಡಿಕ್ಕಲ್ 8 ರನ್ ಬಾರಿಸಿದರೆ, ಅನೀಶ್ ಕೆವಿ 21 ರನ್ ಸ್ಮರಣ್ ರವಿಚಂದ್ರನ್ 101 ಬಾರಿಸಿದರು. ಇನ್ನುಳಿದಂತೆ ಕೃಷ್ಣನ್ ಶ್ರೀಜಿತ್ 78 ರನ್ ಬಾರಿಸಿ ಆಸರೆಯಾದರೆ, ಅಭಿನವ್ ಮನೋಹರ್ 42 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 79 ಸಿಡಿಸಿದರು, ಹಾರ್ದಿಕ್ ರಾಜ್ ಅಜೇಯ 12 ಹಾಗೂ ಶ್ರೇಯಸ್ ಗೋಪಾಲ್ ಅಜೇಯ 3 ರನ್ ಗಳಿಸಿದರು.
ವಿದರ್ಭ ಪರ ದರ್ಶನ್ ನಾಲ್ಕಂಡೆ ಹಾಗೂ ನಚಿಕೇತ್ ತಲಾ 2 ವಿಕೆಟ್ ಪಡೆದರೆ, ಯಶ್ ಠಾಕೂರ್ ಹಾಗೂ ಯಶ್ ಖಡಮ್ ತಲಾ ಒಂದೊಂದು ವಿಕೆಟ್ ಪಡೆದರು.
ವಿದರ್ಭ ಇನ್ನಿಂಗ್ಸ್: ಧೃವ್ ಶೋರೆ 110, ಯಶ್ ರಾಥೋಡ್ 22, ಕರುಣ್ ನಾಯರ್ 27, ಯಶ್ ಖಡಮ್ 15, ಜಿತೇಶ್ ಶರ್ಮಾ 34, ಶುಭಮ್ ದುಬೆ 8, ಅಪೂರ್ವ್ ವಾಂಖಡೆ 12, ಹರ್ಷ್ ದುಬೆ 63, ನಚಿಕೇತ್ 5, ದರ್ಶನ್ ನಾಲ್ಕಂಡೆ 11 ರನ್ ಹಾಗೂ ಯಾವುದೇ ರನ್ ಗಳಿಸದ ಯಶ್ ಠಾಕೂರ್ ಅಜೇಯರಾಗಿ ಉಳಿದರು.
ಕರ್ನಾಟಕದ ಪರ ವಾಸುಕಿ ಕೌಶಿಕ್, ಪ್ರಸಿದ್ಧ್ ಕೃಷ್ಣ ಹಾಗೂ ಅಭಿಲಾಷ್ ಶೆಟ್ಟಿ ತಲಾ 3 ವಿಕೆಟ್ ಪಡೆದರೆ, ಹಾರ್ದಿಕ್ ರಾಜ್ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿದ ಸಮರ್ಥ್ ರವಿಚಂದ್ರನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ಅತ್ಯುತ್ತಮ ಆಟವನ್ನಾಡಿದ ಕರುಣ್ ನಾಯರ್ ಸರಣಿಶ್ರೇಷ್ಠ ಪಡೆದರು.