ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ʼಅನ್‌ಬಾಕ್ಸ್ʼ ಈವೆಂಟ್ ಅದ್ದೂರಿಯಾಗಿ ನಡೆಯಿತು.
ಈ ಈವೆಂಟ್‌ನಲ್ಲಿ ಆರ್‌ಸಿಬಿಯ ಹೆಸರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೆಸರನ್ನು ʼರಾಯಲ್ ಚಾಲೆಂಜರ್ಸ್ ಬೆಂಗಳೂರುʼ ಎಂದು ಅಧಿಕೃತವಾಗಿ ಬದಲಾಯಿಸಿದೆ.
ಇದೇ ವೇಳೆ ಆರ್‌ಸಿಬಿ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ನೀಲಿ ಮತ್ತು ಕೆಂಪು ಬಣ್ಣ ಸಂಯೋಜನೆಯ ಜೆರ್ಸಿಯನ್ನು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸ್ಸಿ, ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾ ಅನಾವರಣಗೊಳಿಸಿದರು.
ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ “ಹೊಸ ಅಧ್ಯಾಯಕ್ಕೆ ಸಮಯ ಬಂದಿದೆ. ನಿಮ್ಮ ತಂಡ, ನಿಮ್ಮ ಆರ್‌ಸಿಬಿ” ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿ ವಿರಾಟ್ ಕೊಹ್ಲಿ ʼಇದು ಆರ್‌ಸಿಬಿ ಯ ಹೊಸ ಅಧ್ಯಾಯʼ ಎಂದು ಕನ್ನಡದಲ್ಲೇ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದರು.
ಅನ್ ಬಾಕ್ಸ್ ಕಾರ್ಯಕ್ರಮಕ್ಕೂ ಮೊದಲು ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ ಮಹಿಳಾ ತಂಡದ ವಿಜಯೋತ್ಸವ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ವೇಗಿ ಆರ್. ವಿನಯ್ ಕುಮಾರ್ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಹಾಲಿವುಡ್ ರ್ಯಾಪರ್ ಆಲನ್ ವಾಕರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಉಪಸ್ಥಿತರಿದ್ದರು.