Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸೂರ್ಯ ಸ್ಪೋಟಕ ಬ್ಯಾಟಿಂಗ್‌ ಅಬ್ಬರಕ್ಕೆ ಮಂಕಾದ ವಿಂಡೀಸ್‌: ಭಾರತಕ್ಕೆ ಭರ್ಜರಿ ಜಯ!

ಗಯಾನ: ಕುಲ್ದೀಪ್‌ ಯಾದವ್‌ (28ಕ್ಕೆ 3) ಸ್ಪಿನ್‌ ಮೋಡಿ ಹಾಗೂ ಸೂರ್ಯಕುಮಾರ್‌ ಯಾದವ್‌ (83 ರನ್‌) ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡಕ್ಕೆ ಮೂರನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಅದರಂತೆ ಗೆದ್ದು ಟಿ20 ಸರಣಿಯಲ್ಲಿ 1-2 ಅಂತರವನ್ನು ಕಾಯ್ದುಕೊಂಡಿದೆ. ಇಲ್ಲಿನ ಪ್ರಾವಿಡೆನ್ಸ್‌ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್‌ ನೀಡಿದ್ದ 160 ರನ ಗುರಿ ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್‌ ಕೇವಲ ಒಂದು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ಶುಭಮನ್ ಗಿಲ್‌ ಕೂಡ ಕೇವಲ 6 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಸೂರ್ಯಕುಮಾರ್‌ ಯಾದವ್, ವಿಂಡೀಸ್‌ ಬೌಲರ್‌ಗಳಿಗೆ ಚಳಿ ಜ್ವರ ಬಿಡಿಸಿದರು. ಇವರು ಎದುರಿಸಿದ ಕೇವಲ 44 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 83 ರನ್‌ ಚಚ್ಚಿದರು ಹಾಗೂ ತಿಲಕ್ ವರ್ಮಾ ಜೊತೆ 87 ರನ್‌ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡವನ್ನು ಗೆಲುವಿನ ಸನಿಹ ತಂದು ಸೂರ್ಯ ವಿಕೆಟ್‌ ಒಪ್ಪಿಸಿದರು.

ಒಂದು ತುದಿಯಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ 37 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 49 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ಅಜೇಯ 20 ರನ್‌ ಗಳಿಸಿದರು. ಅಂತಿಮವಾಗಿ ಭಾರತ ತಂಡ 17.5 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 164 ರನ್‌ಗಳನ್ನು ಗಳಿಸಿ ಗೆಲುವು ಪಡೆಯಿತು. ವಿಂಡೀಸ್‌ ಪರ ಆಲ್ಜಾರಿ ಜೋಸೆಫ್‌ 2 ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡ ಬ್ರ್ಯಾಂಡನ್‌ ಕಿಂಗ್‌ (42 ರನ್‌) ಹಾಗೂ ರೋವ್ಮನ್‌ ಪೊವೆಲ್‌ (40*) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಭಾರತ ತಂಡಕ್ಕೆ 160 ರನ್‌ ಗುರಿ ನೀಡಿತ್ತು. ಭಾರತದ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಕುಲ್ದೀಪ್‌ ಯಾದವ್‌ 28 ರನ್‌ ನೀಡಿ 3 ವಿಕೆಟ್‌ಗಳನ್ನು ಕಿತ್ತರು.

ಸ್ಕೋರ್‌ ವಿವರ

ಭಾರತ: 17.5 ಓವರ್‌ಗಳಿಗೆ 164-3 (ಸೂರ್ಯಕುಮಾರ್‌ ಯಾದವ್‌ 83, ತಿಲಕ್‌ ವರ್ಮಾ 49*, ಹಾರ್ದಿಕ್‌ ಪಾಂಡ್ಯ 20*; ಆಲ್ಝಾರಿ ಜೋಸೆಫ್‌ 25ಕ್ಕೆ 2

ಪಂದ್ಯ ಶ್ರೇಷ್ಠ : ಸೂರ್ಯಕುಮಾರ್‌ ಯಾದವ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ