ಕೊಲ್ಕತ್ತಾ: ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣ ಫುಟ್‌ಬಾಲ್ ದಂತಕಥೆ ಸುನಿಲ್ ಚೆಟ್ರಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಾಕ್ಷಿಯಾಗಿದೆ.
ಇಂದು ( ಜೂನ್ 6 ) ನಡೆದ ಕುವೈತ್ ವಿರುದ್ಧದ ಪಂದ್ಯದ ಮೂಲಕ ಈ ಮೊದಲೇ ಘೋಷಿಸಿದಂತೆ ತಮ್ಮ ವೃತ್ತಿ ಬದುಕನ್ನು ಕೊನೆಗೊಳಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ಹಾಗೂ ಕುವೈತ್ ಎರಡೂ ತಂಡಗಳೂ ಸಹ ಯಾವುದೇ ಗೋಲ್ ಬಾರಿಸುವಲ್ಲಿ ಯಶಸ್ವಿಯಾಗದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಪಂದ್ಯ ಮುಗಿಯುತ್ತಿದ್ದಂತೆ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು, ಭಾರತ ತಂಡದ ಆಟಗಾರರಲ್ಲಿ ಬೇಸರ ಮನೆಮಾಡಿತ್ತು. 19 ವರ್ಷಗಳ ಕಾಲ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಡಿ, ಭಾರತದಲ್ಲಿ ಕಾಲ್ಚೆಂಡಿನ ಕ್ರೇಜ್ ಹೆಚ್ಚಿಸಿದ ಸುನಿಲ್ ಚೆಟ್ರಿ ಕಣ್ಣೀರಿಡುತ್ತಾ ಮೈದಾನವನ್ನು ಒಂದು ಸುತ್ತುಹಾಕಿ ಅಭಿಮಾನಿಗಳತ್ತ ಕೈ ಬೀಸಿ ನಿರ್ಗಮಿಸಿದರು.