Mysore
20
overcast clouds
Light
Dark

ಮೂರನೇ ಬಾರಿ ಒಂದೇ ಇನ್ನಿಂಗ್ಸ್ ನಲ್ಲಿ 3 ಶತಕ ದಾಖಲಿಸಿದ ದಕ್ಷಿಣ ಆಫ್ರಿಕಾ

ನವದೆಹಲಿ : ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಪೇರಿಸಿದೆ. ತಂಡದ ಪರವಾಗಿ ಮೂರು ಶತಕ ದಾಖಲಿಸುವುದರೊಂದಿಗೆ 428 ರನ್ ಗಳಿಸಿದೆ.

ವಿಶ್ವಕಪ್‌ ಇತಿಹಾಸದಲ್ಲೇ ಅತೀ ಹೆಚ್ಚು ರನ್‌ ಗಳಿಸಿದ ಹೆಗ್ಗಳಿಗೆ ಪಾತ್ರವಾದ ದಕ್ಷಿಣ ಆಫ್ರಿಕಾ ಮೂರನೇ ಬಾರಿ ಒಂದೇ ಇನ್ನಿಂಗ್ಸ್ ನಲ್ಲಿ ಮೂರು ಶತಕ ದಾಖಲಿಸಿದ ಇತಿಹಾಸ ಸೃಷ್ಟಿಸಿದೆ. ಈ ಹಿಂದೆ 2015ರಲ್ಲಿ ಜೋಹಾನ್ಸ್‌ ಬರ್ಗ್‌ ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ 2 ವಿಕೆಟ್‌ ನಷ್ಟಕ್ಕೆ 439 ರನ್ ಗಳಿಸಿತ್ತು. ಆ ಪಂದ್ಯದಲ್ಲಿ ಹಾಶಿಮ್ ಆಮ್ಲಾ 153 ರನ್‌ ಗಳಿಸಿ ನಾಟೌಟ್‌ ಆಗಿದ್ದರು. ಎಬಿಡಿ ವಿಲಿಯರ್ಸ್ 149, ರಿಲೀ ರೋಸೌವ್ 128 ರನ್‌ ಗಳಿಸಿದ್ದರು.

ಈ ಪಂದ್ಯದಲ್ಲಿ ಕೇವಲ 31 ಬಾಲ್‌ ಗೆ ಶತಕ ಗಳಿಸಿದ್ದ ಎಬಿಡಿ ಯವರ ಸಾಧನೆ ಇದುವರೆಗಿನ ಕ್ರಿಕೆಟ್‌ ಇತಿಹಾಸದಲ್ಲಿ ಅತೀ ವೇಗದ ಶತಕ ಎಂದೇ ದಾಖಲಾಗಿದೆ. ಅದೇ ವರ್ಷ 20115ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ದಕ್ಷಿಣ ಆಫ್ರಿಕಾ ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 4 ವಿಕೆಟ್‌ ನಷ್ಟಕ್ಕೆ 438 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಪರ ಫಾಫ್ ಡು ಪ್ಲೆಸಿಸ್ 133 ರನ್‌, ಎಬಿಡಿ ವಿಲಿಯರ್ಸ್‌ 119, ಕ್ವಿಂಟನ್‌ ಡಿಕಾಕ್ 109 ರನ್ ಗಳಿಸಿ ಮೂರು ಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ಮತ್ತೆ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಎಬಿಡಿ 61 ಎಸೆತಗಳಲ್ಲಿ 3 ಬೌಂಡರಿ, 11 ಸಿಕ್ಸರ್‌ ಗಳೊಂದಿಗೆ 119 ರನ್‌ ಗಳಿಸಿ ಕ್ರಿಕೆಟ್‌ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದ್ದರು.

ಈ ಪಂದ್ಯದಲ್ಲಿ ಭಾರತ ಸೋತಿತ್ತು. ಇವತ್ತಿನ ವಿಶ್ವಕಪ್ ಪಂದ್ಯದಲ್ಲಿ 5 ವಿಕೆಟ್ ಗೆ 428 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಶ್ರೀಲಂಕಾಕ್ಕೆ ಬೃಹತ್ ಸವಾಲು ನೀಡಿದೆ. ಈ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ 100, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 108, ಐಡೆನ್ ಮಾರ್ಕ್ರಾಮ್ 106 ರನ್‌ ಗಳಿಸಿದ್ದಾರೆ. ಕೇವಲ 54 ಎಸೆತಗಳಲ್ಲಿ 106 ರನ್‌ ಗಳಿಸಿದ ಐಡೆನ್ ಮಾರ್ಕ್ರಾಮ್ ಅವರು 14 ಬೌಂಡರಿಗಳೊಂದಿಗೆ 3 ಸಿಕ್ಸರ್‌ ಬಾರಿಸಿ ತಂಡದ ರನ್‌ ಗಳಿಕೆಗೆ ವೇಗ ನೀಡಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ