Mysore
31
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಶುಭ್‌ಮನ್‌ ಗಿಲ್‌ ವಿವಾದಾತ್ಮಕ ಔಟ್‌: 3ನೇ ಅಂಪೈರ್‌ ವಿರುದ್ಧ ಕಿಡಿಕಾರಿದ ಕ್ರಿಕೆಟ್‌ ದಿಗ್ಗಜರು

ಲಂಡನ್‌: ಭಾರತ ತಂಡದ ಯುವ ಆರಂಭಿಕ ಶುಭಮನ್ ಗಿಲ್‌ ಅವರಿಗೆ ವಿವಾದಾತ್ಮಕ ಔಟ್‌ ನೀಡಿದ ಮೂರನೇ ಅಂಪೈರ್‌ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಕಿಡಿ ಕಾರಿದ್ದಾರೆ. 19 ಎಸೆತಗಳಲ್ಲಿ 18 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಶುಭಮನ್ ಗಿಲ್‌ ಮೂರನೇ ಅಂಪೈರ್‌ ತೀರ್ಪಿನಿಂದ ಔಟ್‌ ಆಗಿ ಬೇಸರದೊಂದಿಗೆ ಪೆವಿಲಿಯನ್‌ಗೆ ತೆರಳಿದ್ದರು.

ಶನಿವಾರ ಅಲೆಕ್ಸ್ ಕೇರಿ (66*) ಅವರ ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 84.3 ಓವರ್‌ಗಳಿಗೆ 270 ರನ್ ಗಳಿಸಿ ಡಿಕ್ಲೆರ್‌ ಮಾಡಿಕೊಂಡಿತು. ಆ ಮೂಲಕ ಟೀಮ್‌ ಇಂಡಿಯಾಗೆ 444 ರನ್‌ ದಾಖಲೆಯ ಗುರಿ ನೀಡಿತು. ಅದರಂತೆ ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ಭಾರತ ತಂಡದ ಪರ ಶುಭಮನ್ ಗಿಲ್‌ ಹಾಗೂ ರೋಹಿತ್‌ ಶರ್ಮಾ ಇನಿಂಗ್ಸ್ ಆರಂಭಿಸಿದರು.

ಹೊಸ ಚೆಂಡಿನಲ್ಲಿ ಆಸೀಸ್‌ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಶುಭಮನ್ ಗಿಲ್, 19 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 18 ರನ್‌ ಗಳಿಸಿದ್ದಾರೆ. ಆ ಮೂಲಕ ಉತ್ತಮ ಆರಂಭ ಪಡೆದಿದ್ದ ಗಿಲ್‌, ದೊಡ್ಡ ಇನಿಂಗ್ಸ್ ಆಡುವ ಮುನ್ಸೂಚನೆ ನೀಡಿದ್ದರು. ಆದರೆ, 8ನೇ ಓವರ್‌ ಮೊದಲನೇ ಎಸೆತದಲ್ಲಿ ಸ್ಕಾಟ್‌ ಬೋಲೆಂಡ್‌ಗೆ ಶುಭಮನ್ ಗಿಲ್‌ ಡಿಫೆನ್ಸ್ ಆಡಿದರು. ಆದರೆ, ಚೆಂಡು ಬ್ಯಾಟ್‌ ತುದಿಗೆ ತಗುಲಿ ಸ್ಲಿಪ್‌ ಕಡೆ ಹಾರಿತು.

ಸ್ಲಿಪ್‌ನಲ್ಲಿದ್ದ ಕ್ಯಾಮೆರಾನ್‌ ಗ್ರೀನ್‌ ಎಡಗೈನಲ್ಲಿ ಚೆಂಡನ್ನು ಹಿಡಿದರು. ಆದರೆ, ಚೆಂಡನ್ನು ಮೇಲೆತ್ತುವ ಸಮಯದಲ್ಲಿ ನೆಲಕ್ಕೆ ತಗುಲಿಸಿರುವುದು ವಿಡಿಯೋ ರೀಪ್ಲೇನಲ್ಲಿ ಕಾಣುತ್ತಿತ್ತು. ಈ ವೇಳೆ ಗೊಂದಲಕ್ಕೆ ಒಳಗಾದ ಫೀಲ್ಡ್‌ ಅಂಪೈರ್‌, ಮೂರನೇ ಅಂಪೈರ್‌ ಸಹಾಯ ಪಡೆದರು.ಅಂದರಂತೆ ಮೂರನೇ ಅಂಪೈರ್‌ 5-6 ಬಾರಿ ವಿಡಿಯೋ ರೀಪ್ಲೇ ವೀಕ್ಷಿಸಿದರು. ಅಂತಿಮವಾಗಿ ಅವರು ಔಟ್‌ ತೀರ್ಮಾನವನ್ನು ದೊಡ್ಡ ಪರದೆಯ ಮೇಲೆ ಪ್ರಕಟಿಸಿದರು.

ಮೂರನೇ ಅಂಪೈರ್‌ ತೀರ್ಪಿನ ಬಗ್ಗೆ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭಮನ್ ಗಿಲ್‌ ಮೈದಾನದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು. ಯುವ ಆರಂಭಿಕ ಗಿಲ್‌ ಬೇಸರದೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಇದರ ಬೆನ್ನಲ್ಲೆ ವೀರೇಂದ್ರ ಸೆಹ್ವಾಗ್‌, ರವಿ ಶಾಸ್ತ್ರಿ ಸೇರಿದಂತೆ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಮೂರನೇ ಅಂಪೈರ್‌ ವಿರುದ್ಧ ಕಿಡಿಕಾರಿದರು.

ಶುಭಮನ್ ಗಿಲ್‌ಗೆ ಔಟ್‌ ನೀಡಿದ ಮೂರನೇ ಅಂಪೈರ್‌ ವಿರುದ್ಧ ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿರುವ ಫೋಟೋವನ್ನು ಹಂಚಿಕೊಂಡ ಸೆಹ್ವಾಗ್‌, “ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಂಪೈರ್‌ ತೀರ್ಮಾನ ನೀಡುತ್ತಿದ್ದಾರೆ. ಯಾವುದೇ ಪುರಾವೆ ಇಲ್ಲ. ನಿಮಗೆ ಅನುಮಾನವಿದ್ದರೆ ನಾಟ್‌ ಔಟ್‌ ನೀಡಬೇಕು,” ಎಂದು ಬರೆದುಕೊಂಡಿದ್ದಾರೆ.

“ಫೀಲ್ಡ್‌ ಅಂಪೈರ್‌ ಮೊದಲು ಔಟ್‌ ನೀಡಿದ ಬಳಿಕ, ಮೂರನೇ ಅಂಪೈರ್‌ ಅದನ್ನು ರದ್ದುಗೊಳಿಸಬೇಕೆಂದರೆ ನಿರ್ದಿಷ್ಟ ಸಾಕ್ಷಿ ಒದಗಿಸಬೇಕು,” ಎಂದು ಟೀ ವಿರಾಮದ ವೇಳೆ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಹೇಳಿದ್ದರು.

“ಒಂದು ವೇಳೆ ಶುಭಮನ್ ಗಿಲ್‌ ಸ್ಥಾನದಲ್ಲಿ ಸ್ಟೀವನ್‌ ಸ್ಮಿತ್‌ ಇದ್ದಿದ್ದರೆ, ಮೂರನೇ ಅಂಪೈರ್‌ ಖಂಡಿತವಾಗಲೂ ನಾಟ್‌ಔಟ್‌ ನೀಡುತ್ತಿದ್ದರು,” ಎಂದು ಹೇಳುವ ಮೂಲಕ ಕಾಮೆಂಟರಿ ವೇಳೆ ರವಿ ಶಾಸ್ತ್ರಿ ನಕ್ಕಿದ್ದಾರೆ.

“ನೀವು ಇದನ್ನು ಹೇಗೆ ನೋಡುತ್ತೀರಿ ಎಂಬುದು ಇದಾಗಿದೆ. ಕ್ಯಾಮೆರಾನ್‌ ಗ್ರೀನ್‌ ತಮ್ಮ ಕೈಬೆರಳುಗಳಿಂದ ಚೆಂಡನ್ನು ಅದರ ಕೆಳ ಭಾಗದಿಂದ ಹಿಡಿದಿದ್ದರು. ಚೆಂಡಿನ ಯಾವುದೇ ಭಾಗ ನೆಲಕ್ಕೆ ತಾಗಿದ್ದರೆ, ಆಗ ನೆಲ ಚೆಂಡನ್ನು ಕೈಯಲ್ಲಿ ಉಳಿಯುವಂತೆ ಮಾಡುತ್ತದೆ. ಇದನ್ನು ಗಮನಿಸಿದ ಅಂಪೈರ್‌ ಸಹಜವಾಗಿ ನಾಟ್‌ ಔಟ್‌ ನೀಡಬೇಕಾಗುತ್ತದೆ,” ಎಂದು ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತಿದ್ದ ಶ್ರೀಲಂಕಾ ದಿಗ್ಗಜ ಕುಮಾರ ಸಂಗಕ್ಕಾರ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ