Mysore
20
overcast clouds
Light
Dark

ವಿಶ್ವ ನಂ.1 ಜೋಡಿ ಮಣಿಸಿ ಕೊರಿಯಾ ಓಪನ್ ಗೆದ್ದ ಸಾತ್ವಿಕ್ ರೆಡ್ಡಿ- ಚಿರಾಗ್ ಶೆಟ್ಟಿ!

ಯೋಸು (ಕೊರಿಯಾ): ಭಾರತದ ನಂಬರ್ 1 ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಣಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು ವಿಶ್ವದ ನಂಬರ್ 1 ಜೋಡಿಯಾದ ಫಜಲ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾಣ್ ಅರ್ಡಿಯಾಂಟೊ ಜೋಡಿಯನ್ನು ಮಣಿಸಿ ಪ್ರತಿಷ್ಠಿತ ಕೊರಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದೆ.

ದಕ್ಷಿಣ ಕೊರಿಯಾದ ಯೋಸುವಿನ ಜಿನ್ನಮ್ ಬ್ಯಾಡ್ಮಿಂಟನ್ ಅಂಗಣದಲ್ಲಿ ಜುಲೈ 23( ಭಾನುವಾರ) ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಜೋಡಿಯಾದ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಮೊದಲ ಸೆಟ್ ನಲ್ಲಿ 17-21 ಸೆಟ್ ನಿಂದ ಹಿನ್ನಡೆ ಕಂಡರೂ ನಂತರ ನಡೆದ ಸೆಟ್ ಗಳಲ್ಲಿ ತಮ್ಮ ವೇಗದ ಸರ್ವ್ ಗಳಿಂದ ಪುಟಿದೆದ್ದು ಇಂಡೋನೇಷ್ಯಾ ಜೋಡಿಯ ವಿರುದ್ಧ ಮೇಲುಗೈ ಸಾಧಿಸಿ 21-13, 21-14 ಸೆಟ್ ಗಳ ಪಂದ್ಯ ಜಯಿಸಿ ಪದಕದೊಂದಿಗೆ 33,180 ಅಮೇರಿಕನ್ ಡಾಲರ್ ಮೊತ್ತ ತಮ್ಮದಾಗಿಸಿಕೊಂಡಿದೆ.

ಸೆಮಿಫೈನಲ್ ನಲ್ಲಿ ಕಠಿಣ ಗುರಿ
ಕೊರಿಯಾ ಓಪನ್ ಸೂಪರ್ ಸಿರೀಸ್ ನ ಆರಂಭಿಕ ಪಂದ್ಯದಿಂದಲೂ ಕಠಿಣ ಹಾದಿ ಸವೆಸಿದ ಸಾತ್ವಿಕ್ ಹಾಗೂ ಚಿರಾಗ್ ಜೋಡಿಯು ಸೆಮಿಫೈನಲ್ ಪಂದ್ಯದಲ್ಲಿ ವಿಶ್ವ ಶ್ರೇಯಾಂಕಿತ ನಂಬರ್ 2 ಜೋಡಿಯಾದ ಚೀನಾದ ಚಾಂಗ್ ವಾಂಗ್ ಹಾಗೂ ವೀಕೆಂಗ್ ಲಿಯಾಂಗ್ ಜೋಡಿ ವಿರುದ್ಧ 21-15 ಹಾಗೂ 24-22 ನೇರ ಸೆಟ್ ಗಳಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಭಾರತದ ಅಗ್ರ ಬ್ಯಾಡ್ಮಿಂಟನ್ ಜೋಡಿಯು ಚೀನಾದ ಜೋಡಿಯ ವಿರುದ್ಧ ಈ ಹಿಂದೆ ನಡೆದ 3 ಪಂದ್ಯಗಳಲ್ಲೂ ಸೋಲು ಕಂಡಿದ್ದರೂ, ಕೊನೆಗೂ ಗೆಲುವಿನ ನಗೆ ಚೆಲ್ಲಿತ್ತು.

ಪ್ರಸಕ್ತ ವರ್ಷದಲ್ಲಿ 4ನೇ ಫೈನಲ್
2023ನೇ ಸಾಲಿನ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುತ್ತಿರುವ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯು 4ನೇ ಬಾರಿ ಫೈನಲ್ ಸುತ್ತು ಪ್ರವೇಶಿಸಿದ್ದು, ಏಷ್ಯನ್ ಚಾಂಪಿಯನ್ ಶಿಪ್, ಇಂಡೋನೇಷ್ಯಾ ಸೂಪರ್1000 ಮತ್ತು ಸ್ವೀಸ್ ಓಪನ್ ಸೂಪರ್ 500 ಸಿರೀಸ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2022 ರಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿರುವ ಸಾತ್ವಿಕ್- ಚಿರಾಗ್ ಜೋಡಿ 2024ರಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವತ್ತ ಗುರಿ ನೆಟ್ಟಿದ್ದಾರೆ.

ಅನುರಾಗ್ ಠಾಕೂರ್ ಅಭಿನಂದನೆ
ಭಾರತದ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರೆಸಿ ಕೊರಿಯಾ ಓಪನ್ ಸಿರೀಸ್ ಗೆದ್ದ ಮೊದಲ ಭಾರತೀಯ ಜೋಡಿ ಎಂಬ ದಾಖಲೆ ಬರೆದಿದ್ದು ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವಿಟ್ ಮಾಡಿ , ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೂಡ ಸಾತ್ವಿಕ್ – ಚಿರಾಗ್ ಜೋಡಿಯ ಸಾಧನೆಯನ್ನು ಶ್ಲಾಘಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ