ಆಸೀಸ್–ವಿಂಡೀಸ್ ಪಂದ್ಯದ ವೀಕ್ಷಕ ವಿವರಣೆ ವೇಳೆ ಅನಾರೋಗ್ಯ
ಪರ್ತ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರನ್ನು ಅನಾರೋಗ್ಯದ ಕಾರಣ, ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಆತಿಥೇಯ ತಂಡ ಹಾಗೂ ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ವೇಳೆ ಪಾಂಟಿಂಗ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಊಟದ ವಿರಾಮದ ವೇಳೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿದ್ದಂತೆಯೇ ಪಾಂಟಿಂಗ್ ಅವರು ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 47 ವರ್ಷದ ಪಾಂಟಿಂಗ್ ಅವರು ತವರಿನಲ್ಲಿ ನಡೆಯುತ್ತಿರುವ 2 ಪಂದ್ಯಗಳ ಟೆಸ್ಟ್ ಸರಣಿ ವೇಳೆ ‘ಸೆವೆನ್ ನೆಟ್‌ವರ್ಕ್’ ವಾಹಿನಿಯ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದ್ದರು.
‘ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರಾಗಿದೆ. ಈ ದಿನದ ವೀಕ್ಷಕ ವಿವರಣೆಯಲ್ಲಿ ಅವರು ಭಾಗವಹಿಸುವುದಿಲ್ಲ’ ಎಂದು ಸೆವೆನ್ ನೆಟ್‌ವರ್ಕ್ ವಾಹಿನಿಯ ವಕ್ತಾರರು ತಿಳಿಸಿದ್ದಾರೆ.