ಕೊಯಂಬತ್ತೂರು: ಭಾರತ ತಂಡದ ಸ್ಪಿನ್ ಬೌಲರ್ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದ್ದಾರೆ. ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕರಾಗಿರುವ ಅಶ್ವಿನ್ ಇದೀಗ ವಿಚಿತ್ರ ಕಾರಣದಿಂದ ಸುದ್ದಿಯಾಗಿದ್ದಾರೆ.
ತಿರುಚ್ಚಿ ವಿರುದ್ಧದ ಪಂದ್ಯದಲ್ಲಿ ಒಂದೇ ಎಸೆತದಲ್ಲಿ ಎರಡು ಬಾರಿ ರಿವೀವ್ ಪಡೆಯಲಾಗಿದೆ. ಒಮ್ಮೆ ರಿವೀವ್ ಪಡೆದು ಮೂರನೇ ಅಂಪೈರ್ ನಿರ್ಧಾರ ಪ್ರಕಟಿಸಿದ ಬಳಿಕ ಆ ತೀರ್ಪಿನ ವಿರುದ್ಧವೇ ಮತ್ತೊಮ್ಮೆ ರಿವೀವ್ ಮಾಡಲಾಗಿದೆ.
ತಿರುಚ್ಚಿ ಆಟಗಾರ ರಾಜಕುಮಾರ್ ಅವರಿಗೆ ಅಶ್ವಿನ್ ಎಸೆದ ಚೆಂಡು ವಿಕೆಟ್ ಕೀಪರ್ ಗ್ಲೌಸ್ ಸೇರಿತು. ಮೈದಾನದ ಅಂಪೈರ್ ಔಟ್ ನೀಡಿದರು. ಆದರೆ ಬ್ಯಾಟರ್ ರಾಜಕುಮಾರ್ ಡಿಆರ್ ಎಸ್ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ಮಾಡುವಾಗ ಬ್ಯಾಟ್ ಚೆಂಡಿಗೆ ಬಡಿಯದೆ, ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಅವರು ಔಟ್ ತೀರ್ಮಾನವನ್ನು ಬದಲಿಸಿ ನಾಟೌಟ್ ಎಂದರು.
Uno Reverse card in real life! Ashwin reviews a review 🤐
.
.#TNPLonFanCode pic.twitter.com/CkC8FOxKd9— FanCode (@FanCode) June 14, 2023
ಮೂರನೇ ಅಂಪೈರ್ ನಾಟೌಟ್ ಎಂದ ಕೂಡಲೇ ಆಕ್ರೋಶಗೊಂಡ ಅಶ್ವಿನ್ ಮತ್ತೆ ಮತ್ತೆ ಡಿಆರ್ ಎಸ್ ಕೇಳಿದರು. ಟಿವಿ ಅಂಪೈರ್ ಮತ್ತೆ ಪರಿಶೀಲನೆ ನಡೆಸಿ ನಾಟೌಟ್ ತೀರ್ಪು ನೀಡಿದರು.
ಪಂದ್ಯದ ಬಳಿಕ ಇದರ ಬಗ್ಗೆ ಮಾತನಾಡಿದ ಅಶ್ವಿನ್, “ಟೂರ್ನಮೆಂಟ್ ನಲ್ಲಿ ಡಿಆರ್ ಎಸ್ ಹೊಸದು. ಚೆಂಡು ಬ್ಯಾಟ್ ನಿಂದ ಹಾದುಹೋಗುವ ಮೊದಲು ಸ್ಪೈಕ್ ಇತ್ತು. ನನಗೆ ಸಂತೋಷವಾಗಲಿಲ್ಲ, ಅವರು ಬೇರೆ ಕೋನದಲ್ಲಿ ನೋಡುತ್ತಾರೆ ಎಂದು ನಾನು ಭಾವಿಸಿದೆ” ಎಂದು ಹೇಳಿದರು.
ಇದರ ಹೊರತಾಗಿಯೂ ಅಶ್ವಿನ್ ನಾಯಕತ್ವದ ದಿಂಡಿಗಲ್ ತಂಡವು ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಿರುಚ್ಚಿ 19.1 ಓವರ್ ನಲ್ಲಿ 120 ರನ್ ಗೆ ಆಲೌಟಾದರೆ, ದಿಂಡಿಗಲ್ ತಂಡವು 14.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು.