Mysore
28
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್.!

ಫೋರ್ಟ್ ಆಫ್ ಸ್ಪೇನ್ (ವೆಸ್ಟ್ ಇಂಡೀಸ್): ಕೆರಿಬಿಯನ್ ನಾಡಿನಲ್ಲಿ ತಮ್ಮ ಸ್ಪಿನ್ ಮೋಡಿ ಮುಂದುವರಿಸಿರುವ ಭಾರತ ತಂಡದ ಆಲ್‌ರೌಂಡರ್‌ ರವಿಚಂದ್ರನ್ ಅಶ್ವಿನ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ನಾಲ್ಕನೇ ದಿನ ಕನ್ನಡಿಗ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಾಲ್ಕನೇ ದಿನದಾಟದಲ್ಲಿ ವಿಂಡೀಸ್‌ ನಾಯಕ ಕ್ರೇಗ್‌ ಬ್ರಾಥ್‌ವೆಟ್ ಹಾಗೂ ಡೆಬ್ಯೂಟೆಂಟ್‌ ಕಿರ್ಕ್‌ ಮೆಕೆಂಜಿ ವಿಕೆಟ್‌ ಕಬಳಿಸಿದ ಅಶ್ವಿನ್‌, ಈ ದೊಡ್ಡ ಸಾಧನೆ ಮಾಡಿದ್ದಾರೆ.

ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧ ಆಡಿರುವ 17 ಟೆಸ್ಟ್ ಪಂದ್ಯಗಳಿಂದ 75 ವಿಕೆಟ್ ಪಡೆದು ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ದಾಖಲೆಯನ್ನು ಈ ಹಿಂದೆ ಬರೆದಿದ್ದರು. ಆದರೆ, ಇದೀಗ ತಮಿಳುನಾಡು ಮೂಲದ ಆಫ್ ಸ್ಪಿನ್ನರ್ ಆರ್ ಅಶ್ವಿನ್ 13 ಪಂದ್ಯಗಳಲ್ಲಿಯೇ 75 ವಿಕೆಟ್ ಕಬಳಿಸಿ ಅನಿಲ್‌ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ 89 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್ ಟೆಸ್ಟ್‌ ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆದವರು

1. ಕಪಿಲ್ ದೇವ್-89 ವಿಕೆಟ್
2. ರವಿಚಂದ್ರನ್ ಅಶ್ವಿನ್-75 ವಿಕೆಟ್
3. ಅನಿಲ್ ಕುಂಬ್ಳೆ-74 ವಿಕೆಟ್
4. ಎಸ್.ವೆಂಕಟರಾಘವನ್- 68 ವಿಕೆಟ್
5. ಬಿ.ಎಸ್.ಚಂದ್ರಶೇಖರ್-65 ವಿಕೆಟ್

ಹರ್ಭಜನ್ ಸಿಂಗ್ ದಾಖಲೆ ಮುರಿದ ಆರ್ ಅಶ್ವಿನ್

ಅನಿಲ್ ಕುಂಬ್ಳೆ ನಂತರ ಭಾರತ ತಂಡದಲ್ಲಿ ಸ್ಪಿನ್ ಬಲ ಹೆಚ್ಚಿಸಿರುವ ರವಿಚಂದ್ರನ್ ಅಶ್ವಿನ್ ವೆಸ್ಟ್ ಇಂಡೀಸ್ ಸರಣಿಯಲ್ಲಿ 15 ವಿಕೆಟ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ 956 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ (712), ಟರ್ಬನೇಟರ್ ಹರ್ಭಜನ್ ಸಿಂಗ್ (711), ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (687) ಹಾಗೂ ಮಾಜಿ ವೇಗಿ ಜಹೀರ್ ಖಾನ್ (610) ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ.

ಗೆಲುವಿನ ಸನಿಹದಲ್ಲಿ ಟೀಮ್‌ ಇಂಡಿಯಾ

ವೆಸ್ಟ್ ಇಂಡೀಸ್ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡ, ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141 ರನ್ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಇದೀಗ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಲು ರೋಹಿತ್ ಶರ್ಮಾ ಪಡೆಗೆ ಇನ್ನೂ 8 ವಿಕೆಟ್ ಅಗತ್ಯವಿದೆ. ಈ ಪಂದ್ಯದಲ್ಲಿ ಭಾರತ ಗೆಲ್ಲಬೇಕೆಂದರೆ ಆರ್ ಅಶ್ವಿನ್ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. 365 ಗುರಿ ಹಿಂಬಾಲಿಸಿರುವ ವೆಸ್ಟ್ ಇಂಡೀಸ್ 4ನೇ ದಿನದಾಟಕ್ಕೆ ಎರಡು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 289 ರನ್ ಅಗತ್ಯವಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!