ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಟೂರ್ನಿಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್ ಹಾಗೂ 207 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಾಂಕ್ ಅಗರ್‌ವಾಲ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಇದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಬೌಲರ್‌ಗಳು ಪಂಜಾಬ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿದರು. ತಂಡದ ಪರ ವಾಸುಕಿ ಕೌಶಿಕ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್ ಪಡೆದರು.
ಇದರ ಬೆನ್ನಲ್ಲೇ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಸ್ಮರಣ್ ರವಿಚಂದ್ರನ್ ಚೊಚ್ಚಲ ದ್ವಿಶತಕದ 203(277) ನೆರವಿನಿಂದ 475 ರನ್‌ಗಳ ಬೃಹತ್ ಮೊತ್ತ ಪೇರಿಸುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 320 ರನ್‌ಗಳ ಮುನ್ನಡೆ ಗಳಿಸಿತು.
ಇದಕ್ಕುತ್ತರವಾಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ನಾಯಕ ಶುಭಮನ್ ಗಿಲ್ 102(171) ಶತಕದ ಹೋರಾಟದ ನಡುವೆ 63.4 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 207 ರನ್‌ಗಳ ಅಂತರದ ಸೋಲನ್ನು ಕಂಡಿತು.
ಕರ್ನಾಟಕದ ಪರ ಯಶೋವರ್ಧನ್ ಹಾಗೂ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದರೆ, ಪ್ರಸಿದ್ಧ ಕೃಷ್ಣ 2 ವಿಕೆಟ್‌ಗಳಿಸಿ ಮಿಂಚಿದರು.
ಈ ಗೆಲುವಿನೊಂದಿಗೆ ಎಲೈಟ್ ʼಸಿʼ ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿರುವ ಕರ್ನಾಟಕ ತಂಡ 19 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.