ಅಹಮದಾಬಾದ್: ಶಶಾಂಕ್ ಸಿಂಗ್ ಅವರ ಏಕಾಂಗಿ ಹೋರಾಟದ ಫಲವಾಗಿ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಮೂರು ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಂಜಾಬ್ 19.5 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗುಜರಾತ್ ಇನ್ನಿಂಗ್ಸ್: ಪಂಜಾಬ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಗಿಲ್ (89*) ಆಕರ್ಷಕ ಅರ್ಧಶತಕ ಗಳಿಸಿದರು. ಅವರಿಗೆ ಕೇನ್ ವಿಲಿಯನ್ (26) ಹಾಗೂ ಸಾಯ್ ಸುದರ್ಶನ್ (33) ಸಹಕರಿಸಿದರು. ಉಳಿದಂತೆ ವೃದ್ಧಿಮಾನ್ ಸಹಾ 11 ಹಾಗೂ ವಿಜಯ್ ಶಂಕರ್ 8 ರನ್ ಗಳಿಸಿದರು. ಕೊನೆಯ ಹಂತದಲ್ಲಿ ರಾಹುಲ್ ತೆವಾಟಿಯಾ 8 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 23 ರನ್ ಗಳಿಸಿ ತಂಡದ ಅಂಕ ಇನ್ನೂರರ ಗಡಿ ದಾಟಲು ಸಹಕರಿಸಿದರು.
ಪಂಜಾಬ್ ಪರ ಕಗಿಸೋ ರಬಾಡ ಎರಡು ವಿಕೆಟ್ ಗಳಿಸಿದರು. ಹರ್ಪ್ರೀತ್ ಬ್ರಾರ್ ಹಾಗೂ ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.
ಪಂಜಾಬ್ ಇನ್ನಿಂಗ್ಸ್: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಪಂಜಾಬ್‌ಗೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಶಿಖರ್ ಧವನ್ ಕೇವಲ ಒಂದು ರನ್ ಗಳಿಸಿ ಬಂದ ಹಾದಿಯಲ್ಲೇ ಹಿಂತಿರುಗಿದರು. ಬಳಿಕ ಬೇರ್‌ಸ್ಟೋ ಜೊತೆಯಾದ ಪ್ರಭ್‌ಸಿಮ್ರಾನ್ ಕೆಲಕಾಲ ಜಿಟಿ ಬೌಲರ್‌ಗಳನ್ನು ಕಾಡಿದರು. ಈ ಇಬ್ಬರು ಕ್ರಮವಾಗಿ 22 ಮತ್ತು 35 ರನ್ ಗಳಿಸಿ ಇಬ್ಬರು ನೂರ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಉಳಿದಂತೆ ಸ್ಯಾಮ್ ಕರನ್ 5, ಸಿಕಂದರ್ ರಾಜಾ 15, ಜಿತೇಶ್ ಶರ್ಮಾ 16 ರನ್ ಕೆಲಹಾಕಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದೆಡೆ ನೆಲಕಚ್ಚಿ ಆಟವಾಡಿದ ಶಶಾಂಕ್ ಸಿಂಗ್ ದಿಟ್ಟ ಹೋರಾಟ ತೋರಿದರು. ಇವರಿಗೆ ಅಶುತೋಷ್ ಉತ್ತಮ ಜೊತೆಯಾಟ ನೀಡಿದರು. ಅಶುತೋಷ್ 17 ಎಸೆತ 3 ಬೌಂಡರಿ 1 ಸಿಕ್ಸರ್ ಸೇರಿ 31 ರನ್ ಬಾರಿಸಿ ನಲ್ಕಂಡೆಗೆ ವಿಕೆಟ್ ಒಪ್ಪಿಸಿದರು.

ಆದರೆ ಪಂದ್ಯದುದ್ದಕ್ಕೂ ಉತ್ತಮ ಆಟವಾಡಿದ ಶಶಾಂಕ್ ಸಿಂಗ್ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು. ಕೇವಲ 29ಎಸೆತ ಎದುರಿಸಿ 6 ಬೌಂಡರಿ 4 ಸಿಕ್ಸರ್ ಸಹಿತ 61 ರನ್ ಗಳಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗುಜರಾತ್ ಪರ ನೂರ್ ಅಹ್ಮದ್ 2, ಓಮರ್ಜಾಯಿ, ಉಮೇಶ್ ಯಾದವ್, ರಶೀದ್ ಖಾನ್, ಮೋಹಿತ್ ಶರ್ಮಾ ಮತ್ತು ನಲ್ಕಂಡೆ ತಲಾ ಒಂದೊಂದು ವಿಕೆಟ್ ಪಡೆದರು.





