ಬೆಂಗಳೂರು : ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ “ನೀರಜ್ ಚೋಪ್ರಾ ಕ್ಲಾಸಿಕ್- 2025” ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆಯೇ ಪ್ರದರ್ಶನ ನೀಡಿದ ನೀರಜ್ ಚೋಪ್ರಾ ಚೊಚ್ಚಲ ಆವೃತ್ತಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ನೀರಜ್ ಅವರು ಈ ಸ್ಪರ್ಧೆಯಲ್ಲಿ 86.18 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇನ್ನೂ ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದರೆ, ಶ್ರೀಲಂಕಾದ ರುಮೇಶ್ ಪತಿರಾಜ್ 84.34 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಹಾಗೆಯೇ ನಾಲ್ಕನೇ ಸ್ಥಾನ ಪಡೆದ ಭಾರತದ ಸಚಿನ್ ಯಾದವ್ 83.23 ಮೀಟರ್ ಎಸೆದರು.
ಗಣ್ಯರಿಂದ ನೀರಾಜ್‌ಗೆ ಸನ್ಮಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನವನ್ನು ವೀಕ್ಷಿಸಿ, ವಿಜೇತರಿಗೆ ಪದಕ ಪ್ರದಾನ ಮಾಡಿ ಗೌರವಿಸಿದರು.
2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ. 1 ಜಾವಲಿನ್ ಪಟು ನೀರಜ್ ಚೋಪ್ರ ತಮ್ಮ ಹೆಸರಿನಲ್ಲಿ ಆರಂಭಿಸಿರುವ ಅಂತಾರಾಷ್ಟ್ರೀಯ ಜಾವಲಿನ್ ಕೂಟವು ಜಾವಲಿನ್ ಎಸೆತದಲ್ಲಿನ ದಿಗ್ಗಜರ ಕ್ರೀಡಾ ಸಾಮರ್ಥ್ಯ ಪ್ರದರ್ಶನದ ವೇದಿಕೆಯಾಗಿದ್ದು, ಮುಂದೆಯೂ ಇಂತಹ ಕ್ರೀಡಾಕೂಟದಲ್ಲಿ ರಾಜ್ಯದಲ್ಲಿ ಆಯೋಜನೆಗೊಂಡು ಯುವ ಜನರನ್ನು ಕ್ರೀಡೆಯತ್ತ ಆಕರ್ಷಿಸಲಿ ಎಂದು ಶುಭ ಕೋರಿದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ , ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ವಿಜೇತರಿಗೆ ಪ್ರಶಸ್ತಿ ಮತ್ತು ಪದಕಗಳನ್ನು ನೀಡಿ ಗೌರವಿಸಿದರು.
ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್ ಅವರು ಉಪಸ್ಥಿತರಿದ್ದರು.