Mysore
29
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೈಸೂರಿನ ಯುವ ಆಲ್‌ರೌಂಡರ್‌ ಮನ್ವಂತ್‌ ಕುಮಾರ್‌ ಡೆಲ್ಲಿ ತಂಡಕ್ಕೆ ಆಯ್ಕೆ

ಮೈಸೂರು: ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯು ಬಹಳ ವಿಶೇಷ ಎನಿಸಲಿದೆ. ಕರ್ನಾಟಕದ 13 ಆಟಗಾರರು ಹರಾಜಿನಲ್ಲಿ ಬಿಡ್‌ ಆಗಿದ್ದು, ಅದರಲ್ಲೂ ಮೈಸೂರಿನ ಯುವ ಪ್ರತಿಭೆ ಮನ್ವಂತ್‌ ಕುಮಾರ್‌ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಮೂಲ ಬೆಲೆ ರೂ 30 ಲಕ್ಷಕ್ಕೆ ಮನ್ವಂತ್‌ ಕುಮಾರ್‌ ಡೆಲ್ಲಿ ಪಾಲಾದರು.

ಮೊದಲ ಹರಾಜು ಪ್ರಕ್ರಿಯೆಯ ಸುತ್ತಿನಲ್ಲಿ ನನಗೆ ಅವಕಾಶ ಸಿಕ್ಕಿರಲಿಲ್ಲ. ನಾನು ಆಯ್ಕೆ ಆಗುವುದಿಲ್ಲ ಅಂದುಕೊಂಡಿದ್ದೆ, ಆದರೆ ಡೆಲ್ಲಿ ತಂಡ ಬಿಡ್‌ ಮಾಡಿರುವುದು ಅಚ್ಚರಿ ತಂದಿದೆ ಎಂದು ಮನ್ವಂತ್‌ ಕುಮಾರ್‌ ಸಂತಸ ವ್ಯಕ್ತಪಡಿಸಿದ್ದಾರೆ.

20 ವರ್ಷ ತುಂಬಿರುವ ಮನ್ವಂತ್‌ ಆಲ್‌ರೌಂಡರ್‌ ಆಟಗಾರರಾಗಿದ್ದಾರೆ. ಈಗಾಗಲೇ ಕರ್ನಾಟಕ ತಂಡದಲ್ಲಿ ಆಡಿರುವ ಅನುಭವವಿರುವ ಮನ್ವಂತ್‌ ಸದ್ಯ ಸಯ್ಯದ್‌ ಮುಸ್ತಾಕ್‌ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ.

ಐಪಿಎಲ್‌ನಲ್ಲಿ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗಿರುವ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ ಅವರು, ಐಪಿಎಲ್‌ ಪ್ಲಾಟ್‌ಫಾರ್ಮ್‌ ನನ್ನ ಕ್ರಿಕೆಟ್‌ ಬೆಳವಣಿಗೆಗೆ ಒಳ್ಳೆಯ ವೇದಿಕೆಯಾಗಲಿದೆ. ಒಂದು ವೇಳೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೆ ನನ್ನ ಪ್ರತಿಭೆಯನ್ನು ಸಾಬೀತು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

12ನೇ ವಯಸ್ಸನಲ್ಲಿ ಮನ್ಸೂರ್‌ ಅಹಮ್ಮದ್‌ ನೇತೃತ್ವದ MUCSC ಕ್ಲಬ್‌ನಲ್ಲಿ ತನ್ನ ಕ್ರಿಕೆಟ್‌ ಜೀವನ ಆರಂಭಿಸಿದ ಮನ್ವಂತ್, ನಂತರ RBNCC ತಂಡ ಸೇರಿದರು. ಈ ವೇಳೆ ಅವರಿಗೆ ಎಂ.ಎಸ್.ರವೀಂದ್ರ, ಬಾಲಚಂದರ್‌ ಸೇರಿದಂತೆ ಮೊದಲಾದವರು ಕೋಚ್‌ ಮಾಡಿದರು.

19 ವರ್ಷ ಹಾಗೂ 23 ವರ್ಷ ಒಳಗಿನ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ. 2023ರ ಮಹಾರಾಜ್‌ ಟ್ರೋಫಿ ಟಿ-20 ಟೂರ್ನಿಯಲ್ಲಿ 23 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್‌ ಕ್ಯಾಪ್‌ ಗೌರವಕ್ಕೆ ಪಾತ್ರರಾದರು. 2024ರ ಆವೃತ್ತಿಯಲ್ಲೂ 16 ವಿಕೆಟ್‌ ಪಡೆದು ಗಮನ ಸೆಳೆಯುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಆಡುವ ಅವಕಾಶದ ಬಾಗಿಲು ತೆರೆದಿದೆ.

ಕ್ರಿಕೆಟ್‌ ಹಿನ್ನೆಲೆ ಇಲ್ಲದ ಕುಟುಂಬ ಇದಾಗಿದ್ದು, ತಂದೆ ಎಸ್.‌ಲಕ್ಷ್ಮಿಕುಮಾರ್‌ ವೃತ್ತಿಯಲ್ಲಿ ಚಾಲಕ, ತಾಯಿ ಶ್ರೀದೇವಿ ಕುಮಾರ್‌ ಗೃಹಿಣಿಯಾಗಿದ್ದಾರೆ. ಆದರೆ ಅಣ್ಣ ಕ್ರಿಕೆಟರ್‌ ಆಗಿದ್ದು, ಮನ್ವಂತ್‌ ಕುಮಾರ್‌ಗೆ ಅಣ್ಣನೇ ಕ್ರಿಕೆಟ್‌ ಆಡಲು ಪ್ರೇರಣೆ ಎಂದು ಹೇಳಲಾಗುತ್ತಿದೆ. ಈ ವೇಳೆ ಐಪಿಎಲ್‌ಗೆ ಮಗನ ಆಯ್ಕೆ ಖುಷಿ ತಂದಿದೆ ಎಂದು ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.

Tags:
error: Content is protected !!