ಮಧ್ಯಪ್ರದೇಶ: ವಿಶ್ವ ಕಪ್ ನಂತರ ಗಾಯಗೊಂಡು ಮೈದಾನದಿಂದ ಹೊರಗುಳಿದಿದ್ದ ಶಮಿ ವರ್ಷದ ಬಳಿಕ ರಣಜಿ ಪಂದ್ಯದಲ್ಲಿ ಮಿಂಚಿದ್ದಾರೆ. ಈ ಮೂಲಕ ತಮ್ಮ ಫಿಟ್‌ನೆಸ್ ಸಾಬೀತು ಮಾಡಿರುವ ಇವರು ಆಸ್ಟ್ರೇಲಿಯಾದ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ.
ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಬಂಗಾಳ ಪರವಾಗಿ ಆಡಿದ ಮಹಮ್ಮದ್ ಶಮಿ ಒಟ್ಟು 7 ವಿಕೆಟ್ ಕಬಳಿಸುವ ಮೂಲಕ ಬಂಗಾಳಕ್ಕೆ ಜಯದ ಕಾಣಿಕೆ ನೀಡಿದರು.
ಮಧ್ಯಪ್ರದೇಶ ತಂಡದ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಬಂಗಾಳ ಮೊದಲ ಇನ್ನಿಂಗ್ಸ್‌ನಲ್ಲಿ 228 ರನ್ ಕಲೆಹಾಕಿತ್ತು. ನಂತರ ಬ್ಯಾಟ್ ಬೀಸಿದ ಮಧ್ಯ ಪ್ರದೇಶ ತಂಡಕ್ಕೆ ಮಾರಕವಾಗಿ ಪರಿಣಮಿಸಿದ ಶಮಿ ಬಂಗಾಳದ ಪರ 4 ವಿಕೆಟ್ ಕಬಳಿಸಿದರು. ಮಧ್ಯಪ್ರದೇಶ ತಂಡವು 167 ರನ್‌ಗಳಿಗೆ ಆಲೌಟ್ ಆಯಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ 226 ರನ್ ಕಲೆಹಾಕಿದ ಬಂಗಾಳ, ಮಧ್ಯಪ್ರದೇಶ ತಂಡಕ್ಕೆ 338 ರನ್‌ಗಳ ಗುರಿ ನೀಡಿದರು.
ಬಂಗಾಳ ನೀಡಿದ ಗುರಿಗೆ ಪ್ರತ್ಯುತ್ತರವಾಗಿ ಮಧ್ಯಪ್ರದೇಶ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಶಹಬಾಜ್ ಅಹ್ಮದ್ ಹಾಗೂ ಮಹಮದ್ ಶಮಿ ಅವರ ಅನುಭವ ಬೌಲಿಂಗ್ ಮುಂದೆ 326 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬಂಗಾಳದ ಮುಂದೆ ಸೋಲೊಪ್ಪಿಕೊಂಡರು.
ತಂಡದ ಗೆಲುವಿನ ರೂವಾರಿಯಾದ ಮಹಮ್ಮದ್ ಶಮಿ ಈ ಪಂದ್ಯದಲ್ಲಿ 44 ಓವರ್‌ಗಳಿಗೆ 156 ರನ್ ನೀಡಿ 7 ವಿಕೆಟ್ ಕಬಳಿಸಿದರು ಹಾಗೂ ಬ್ಯಾಟಿಂಗ್‌ನಲ್ಲೂ ಮಿಂಚಿದ ಶಮಿ 37ರನ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದರು.