Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಎಂಎಲ್‌ಸಿ ಸೀಸನ್‌-1ರ ಚಾಂಪಿಯನ್‌ ಪಟ್ಟ ಅಲಂಕರಿಸಿದ ಎಂಐ ನ್ಯೂಯಾರ್ಕ್!

ಡಲ್ಲಾಸ್‌: ನಿಕೋಲಸ್‌ ಪೂರನ್‌ (55 ಎಸೆತಗಳಲ್ಲಿ ಅಜೇಯ 137* ರನ್‌) ಅವರ ಸಿಡಿಲಬ್ಬರದ ಶತಕದ ಬಲದಿಂದ ಮಿಂಚಿದ ಎಂಐ ನ್ಯೂಯಾರ್ಕ್‌ ತಂಡ ಚೊಚ್ಚಲ ಆವೃತ್ತಿಯ ಮೇಜರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.

ಭಾನುವಾರ (ಜುಲೈ 30)ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಮಾಲೀಕತ್ವದ ಎಂಐ ನ್ಯೂಯಾರ್ಕ್‌ ತಂಡ ಸಿಯಾಟಲ್‌ ಒರ್ಕಾಸ್‌ ತಂಡವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿದು ಟ್ರೋಫಿ ಎತ್ತಿಹಿಡಿಯಿತು.

ಇಲ್ಲಿನ ಗ್ರ್ಯಾಂಡ್‌ ಪ್ರೈಯರ್‌ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸಿಯಾಟಲ್‌ ಒರ್ಕಾಸ್ ತಂಡ ತನ್ನ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 183 ರನ್‌ಗಳ ದೊಡ್ಡ ಮೊತ್ತವನ್ನೇ ಕಲೆಹಾಕಿತು. ವಿಕೆಟ್‌ಕೀಪರ್‌ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌, ಎದುರಿಸಿದ 52 ಎಸೆತಗಳಲ್ಲಿ 9 ಫೋರ್‌ ಮತ್ತು 4 ಸಿಕ್ಸರ್‌ಗಳ ಬಲದಿಂದ 87 ರನ್‌ ಸಿಡಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಕಾರಣ ಒರ್ಕಾಸ್‌ ತಂಡ 200ರ ಗಡಿ ದಾಟಲು ವಿಫಲವಾಯಿತು.
ಎಂಐ ಪರ ಭರ್ಜರಿ ಬೌಲಿಂಗ್‌ ಪ್ರದರ್ಶನ ತೋರಿದ ಅನುಭವಿ ಟ್ರೆಂಟ್‌ ಬೌಲ್ಟ್‌, 4 ಓವರ್‌ಗಳಲ್ಲಿ 34 ರನ್‌ ಕೊಟ್ಟು 3 ವಿಕೆಟ್‌ಗಳನ್ನು ಪಡೆದರು. ಸ್ಟಾರ್‌ ಸ್ಪಿನ್ನರ್‌ ರಶೀದ್‌ ಖಾನ್‌, 9ಕ್ಕೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಒರ್ಕಾಸ್‌ ಅಬ್ಬರಕ್ಕೆ ಬ್ರೇಕ್‌ ಹಾಕಿದರು.

ಆರಂಭಿಕ ಆಘಾತ ಕಂಡಿದ್ದ ನ್ಯೂಯಾರ್ಕ್‌ : ಬಳಿಕ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್‌ ತಂಡ ಆರಂಭಿಕ ಆಘಾತಕ್ಕೊಳಗಾಗಿತ್ತು. ಮೊದಲ ಓವರ್‌ನಲ್ಲೇ ಓಪನರ್‌ ಸ್ಟೀವನ್‌ ಟೇಲರ್‌ ಡಕ್‌ಔಟ್‌ ಆದರೆ, ಮತ್ತೊಬ್ಬ ಓಪನರ್‌ ಶಯಾನ್‌ ಜಹಾಂಗೀರ್‌ 11 ಎಸೆತಗಳಲ್ಲಿ 10 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಸ್ಟಾರ್‌ ಬ್ಯಾಟರ್‌ ಡೆವಾಲ್ಡ್‌ ಬ್ರೆವಿಸ್‌ (18 ಎರಸೆತಗಳಲ್ಲಿ 20 ರನ್‌) ರನ್‌ ಔಟ್‌ ಆಗಿದ್ದು ನ್ಯೂಯಾರ್ಕ್‌ ತಂಡಕ್ಕೆ ದೊಡ್ಡ ಆಘಾತವನ್ನೇ ತಂದೊಡ್ಡಿತ್ತು.

ನಿಕೋಲಸ್‌ ಪೂರನ್‌ ಶತಕದ ಅಬ್ಬರ : ಆರಂಭಿಕ ಆಘಾತ ತಂಡ ನ್ಯೂಯಾರ್ಕ್‌ ತಂಡಕ್ಕೆ ಆಸರೆಯಾಗಿದ್ದು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌, ಕ್ರೀಸ್‌ಗೆ ಬಂದ ಕೂಡಲೇ ಹೊಡಿಬಡಿ ಆಟ ಆರಂಭಿಸಿದ್ದ ಪೂರನ್‌, ಕೇವಲ 55 ಎಸೆತಗಳಲ್ಲಿ 10 ಫೋರ್‌ ಮತ್ತು ಬರೋಬ್ಬರಿ 13 ಸಿಕ್ಸರ್‌ಗಳ ಬಲದಿಂದ ಅಜೇಯ 137 ರನ್‌ ಸಿಡಿಸಿ ತಂಡವನ್ನು 16 ಓವರ್‌ಗಳಲ್ಲೇ ಜಯದ ದಡ ಮುಟ್ಟಿಸಿದರು.
ಒರ್ಕಾಸ್‌ ಪರ ಇಮಾಸ್‌ ವಾಸಿಮ್‌ (14ಕ್ಕೆ 1) ಮತ್ತು ವೇಯ್ನ್‌ ಪಾರ್ನೆಲ್ (22ಕ್ಕೆ 1) ವಿಕೆಟ್‌ ಪಡೆದ ಬೌಲರ್‌ಗಳೆನಿಸಿದರು. ಶತಕ ವೀರ ನಿಕೋಲಸ್‌ ಪೂರನ್‌ ಪಂದ್ಯ ಶ್ರೇಷ್ಠ ಗೌರವ ಪಡೆದರೆ, ಟೂರ್ನಿಯಲ್ಲಿ ಮಿಂಚಿದ ಬೌಲರ್‌ ಕ್ಯಾಮೆರಾನ್‌ ಗ್ಯಾನನ್ ಟೂರ್ನಿ ಶ್ರೇಷ್ಠ ಆಟಗಾರನ ಗೌರವ ಪಡೆದರು.
ಸಂಕ್ಷಿಪ್ತ ಸ್ಕೋರ್‌
ಸಿಯಾಟಲ್‌ ಒರ್ಕಾಸ್‌:
20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 183 ರನ್‌ (ಕ್ವಿಂಟನ್‌ ಡಿ ಕಾಕ್‌ 87, ಶುಭಂ ರಂಜನೆ 29, ಡ್ವೇಯ್ನ್ ಪ್ರೆಟೊರಿಯಸ್‌ 21; ಟ್ರೆಂಟ್‌ ಬೌಲ್ಟ್‌ 34ಕ್ಕೆ 3, ರಶೀದ್‌ ಖಾನ್‌ 9ಕ್ಕೆ 3, ಸ್ಟೀವನ್‌ ಟೇಲರ್‌ 25ಕ್ಕೆ 1).
ಎಂಐ ನ್ಯೂಯಾರ್ಕ್: 16 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 184 ರನ್‌ (ನಿಕೋಲಸ್‌ ಪೂರನ್ 137*, ಡೆವಾಲ್ಡ್‌ ಬ್ರೆವಿಸ್‌ 20; ಇಮಾದ್‌ ವಾಸಿಮ್ 14ಕ್ಕೆ 1, ವೇಯ್ನ್ ಪಾರ್ನೆಲ್ 22ಕ್ಕೆ 1).
ಪಂದ್ಯಶ್ರೇಷ್ಠ: ನಿಕೋಲಸ್ ಪೂರನ್
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ