Mysore
23
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

KSCA ಅಧ್ಯಕ್ಷರಾಗಿ ರಘುರಾಮ್ ಭಟ್ ಅವಿರೋಧ ಆಯ್ಕೆ

ಬೆಂಗಳೂರು: ಮಾಜಿ ಎಡಗೈ ಸ್ಪಿನ್ನರ್ ರಘುರಾಮ್ ಭಟ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನವೆಂಬರ್ 20ರಂದು ಚುನಾವಣೆ ನಿಗದಿಯಾಗಿತ್ತು. ಅಭ್ಯರ್ಥಿಗಳಿಗೆ ನಾಮಪತ್ರ ಮರಳಿ ಪಡೆಯಲು ಬುಧವಾರ ಕೊನೆಯ ದಿನವಾಗಿತ್ತು. ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ  ಬಿ.ಎನ್. ಮಧುಕರ್‌, ಸಂಜಯ್ ಪೋಳ್ ಹಾಗೂ ವಿನಯ್ ಮೃತ್ಯುಂಜಯ ಅವರು ತಮ್ಮ ನಾಮಪತ್ರ ಮರಳಿ ಪಡೆದರು. ಭಟ್ ಅವರೊಂದಿಗೆ ಇನ್ನುಳಿದ ಸ್ಥಾನಗಳಿಗೆ ಹಾಗೂ ಆಡಳಿತ ಸಮಿತಿ ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದವರಲ್ಲಿ ಶಾವೀರ್ ತಾರಾಪುರೆ (ಜಂಟಿ ಕಾರ್ಯದರ್ಶಿ) ಅವರೊಬ್ಬರೇ ಮತ್ತೊಂದು ಅವಧಿಗೆ ಮುಂದುವರಿದಿದ್ದಾರೆ. ಉಳಿದವರೆಲ್ಲರೂ ಕೂಲಿಂಗ್ ಆಫ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಎ. ಶಂಕರ್ ಕಾರ್ಯದರ್ಶಿ ಹಾಗೂ ಬಿ.ಕೆ. ಸಂಪತ್ ಕುಮಾರ್ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

ರಘುರಾಮ್ 1980 ರಿಂದ 1993 ರವರೆಗೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದಾರೆ. ಭಾರತ ತಂಡವನ್ನು ಎರಡು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. 64 ವರ್ಷದ ರಘುರಾಮ್ ಈಗ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಈಚೆಗೆ ಆಯ್ಕೆಯಾಗಿದ್ದರು. ಉಪಾಧ್ಯಕ್ಷರಾಗಿದ್ದ ಜೆ. ಅಭಿರಾಮ್ ಅವರು ನಾಮಪತ್ರ ಸಲ್ಲಿಸಿರಲಿಲ್ಲ. ಸದ್ಯ ಚುನಾಯಿತರಾಗಿರುವ ಪದಾಧಿಕಾರಿಗಳು ಹಾಗೂ ಸಮಿತಿಯು 2025ರವರೆಗೆ ಅಧಿಕಾರದಲ್ಲಿರಲಿದೆ.

ಚುನಾವಣಾಧಿಕಾರಿ ಎಂ.ಆರ್. ಹೆಗಡೆ ಅಂತಿಮಗೊಳಿಸಿರುವ ಪಟ್ಟಿ: ರಘುರಾಮ್ ಭಟ್ (ಅಧ್ಯಕ್ಷ), ಬಿ.ಕೆ. ಸಂಪತ್ ಕುಮಾರ್ (ಉಪಾಧ್ಯಕ್ಷ), ಎ. ಶಂಕರ್ (ಕಾರ್ಯದರ್ಶಿ), ಶಾವೀರ್ ತಾರಾಪುರೆ(ಜಂಟಿ ಕಾರ್ಯದರ್ಶಿ), ಇ.ಎಸ್. ಜಯರಾಮ್ (ಖಜಾಂಚಿ)

ಆಡಳಿತ ಸಮಿತಿ ಸದಸ್ಯರು: ಬೆಂಗಳೂರು ವಲಯ: ಎಂ.ಎಸ್. ಕೇಶವ್ (ಸ್ವಸ್ತಿಕ್ ಯೂನಿಯನ್ ಸಿಸಿ), ಕೆ.ವಿ. ಮಂಜುನಾಥ ರಾಜು (ಹೆಮಂಡ್ಸ್ ಸಿಸಿ), ಎಂ.ಎಸ್. ವಿನಯ್ (ಫ್ರೆಂಡ್ಸ್‌ ಯೂನಿಯನ್ ಸಿಸಿ).

ಮೈಸೂರು ವಲಯ: ಹರಿಕೃಷ್ಣಕುಮಾರ್ ಆರ್.ಕೆ. (ನ್ಯಾಷನಲ್ ಸಿಸಿ, ಮೈಸೂರು)

ಶಿವಮೊಗ್ಗ: ಎಚ್‌.ಎಸ್. ಸದಾನಂದ (ದುರ್ಗಿಗುಡಿ ಕ್ರಿಕೆಟ್‌ ಸಂಸ್ಥೆ)

ತುಮಕೂರು: ಕೆ. ಶಶಿಧರ್ (ವೀನಸ್ ಸಿಸಿ)

ಧಾರವಾಡ: ನಿಖಿಲ್ ಎಂ ಭೂಸದ್ (ಬಿಡಿಕೆ ಕ್ರೀಡಾ ಪ್ರತಿಷ್ಠಾನ. ಹುಬ್ಬಳ್ಳಿ)

ರಾಯಚೂರು: ಸುಜಿತ್ ಬೊಹರಾ (ಸಿಟಿ ಎಲೆವನ್ ಸಿಸಿ)

ಮಂಗಳೂರು: ರತನ್ ಕುಮಾರ್ (ಮಂಗಳೂರು ಸ್ಪೋರ್ಟ್ಸ್ ಕ್ಲಬ್)

ಸಂಜಯ್ ಪೋಳ್ ಹಾಗೂ ಎನ್.ಎನ್. ಯುವರಾಜ್ (ಆಜೀವ ಸದಸ್ಯರ ವಿಭಾಗದಿಂದ ಅವಿರೋಧವಾಗಿ ಆಯ್ಕೆಯಾದವರು)

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!