Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಮೊಯೀನ್‌ ಅಲಿಗೆ ಕೊಕ್, ಲಾರ್ಡ್ಸ್‌ ಟೆಸ್ಟ್‌ಗೆ ಪ್ಲೇಯಿಂಗ್‌ 11 ಪ್ರಕಟ ಮಾಡಿದ ಇಂಗ್ಲೆಂಡ್!

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2023ರ ಸಾಲಿನ ಪ್ರತಿಷ್ಠಿತ ದಿ ಆಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ 2ನೇ ಪಂದ್ಯಕ್ಕೆ ಇಂಗ್ಲೆಂಡ್‌ ತಂಡ ತನ್ನ ಆಡುವ 11ರ ಬಳಗವನ್ನು ಒಂದು ದಿನ ಮೊದಲೇ ಪ್ರಕಟ ಮಾಡಿದೆ. ಪ್ರಥಮ ಟೆಸ್ಟ್‌ ವೇಳೆ ಕೈ ಬೆರಳಿನ ಗಾಯದ ಸಮಸ್ಯೆ ಎದುರಿಸಿದ್ದ ಸ್ಟಾರ್‌ ಆಲ್‌ರೌಂಡರ್‌ ಮೊಯೀನ್‌ ಅಲಿ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿರುವ ಇಂಗ್ಲೆಂಡ್‌, ಅವರ ಜಾಗಕ್ಕೆ ಯುವ ವೇಗದ ಬೌಲರ್‌ ಜಾಶ್‌ ಟಂಗ್‌ ಅವರನ್ನು ಆಯ್ಕೆ ಮಾಡಿಕೊಂಡಿದೆ.

ನಿವೃತ್ತಿಯಿಂದ ಆಚೆ ಬಂದು ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದ ಮೊಯೀನ್‌ ಅಲಿ, ಗಾಯದ ಸಮಸ್ಯೆ ಕಾರಣ ಪ್ರಥಮ ಟೆಸ್ಟ್‌ನಲ್ಲಿ ಪರಿಣಾಮ ಕಾರಿ ಪ್ರದರ್ಶನ ನೀಡಲು ವಿಫಲರಾದರು. ಇನ್ನು ಎರಡನೇ ಟೆಸ್ಟ್‌ಗೆ ಆತಿಥ್ಯ ವಹಿಸಿರುವ ದಿ ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ ವೇಗದ ಬೌಲರ್‌ಗಳಿಗೆ ನೆರವಾಗುತ್ತದೆ. ಸ್ಪಿನ್ನರ್‌ಗಳಿಗೆ ಇಲ್ಲಿ ಕವಡೆ ಕಿಮ್ಮತ್ತಿಲ್ಲ ಎಂಬುದನ್ನು ಅರಿತ ಇಂಗ್ಲೆಂಡ್‌ ಟೀಮ್ ಮ್ಯಾನೇಜ್ಮೆಂಟ್‌ ಅಲಿ ಅವರನ್ನು ಹೊರಗಿಟ್ಟು ಸಂಪೂರ್ಣ ವೇಗಿಗಳ ಬೌಲಿಂಗ್‌ ಬಳಗವನ್ನು ಕಣಕ್ಕಿಳಿಸಲು ಮುಂದಾಗಿದೆ.

ಜೂನ್‌ ಆರಂಭದಲ್ಲಿ ನಡೆದ ಐರ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದು 5 ವಿಕೆಟ್‌ ಸಾಧನೆ ಮೆರೆದಿದ್ದ ಜಾಶ್‌ ಟಂಗ್‌ ಅವರನ್ನು ಅಲಿ ಸ್ಥಾನದಲ್ಲಿ ಇಂಗ್ಲೆಂಡ್‌ನ ಆಡುವ 11ರ ಬಳಗಕ್ಕೆ ಸೇರಿಸಲಾಗಿದೆ. ಇಂಗ್ಲೆಂಡ್‌ ತಂಡದ ಪರಿಣತ ಸ್ಪಿನ್ನರ್‌ ಜಾಕ್‌ ಲೀಚ್‌ ಗಾಯಗೊಂಡಿದ್ದ ಕಾರಣ ಮೊಯೀನ್ ಅಲಿ ಅವರನ್ನು ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ಮರಳಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಪಡೆದ ಅಲಿ, 37 ರನ್‌ ಕೊಡುಗೆ ಮಾತ್ರ ನೀಡಿದ್ದರು. ಕೈಬೆರಳು ಗಾಯವಾಗಿದ್ದ ಕಾರಣ ಅವರು ಚೆಂಡಿನ್ನು ಹಿಡಿಯಲು ಕಷ್ಟ ಪಡುತ್ತಿದ್ದರಿಂದ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶನ ನೀಡಲು ವಿಫಲರಾದರು.

ನಾಯಕ ಬೆನ್‌ ಸ್ಟೋಕ್ಸ್‌ ಜೊತೆಗೆ 4 ವೇಗಿಗಳು ಎರಡನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಈ ನಡುವೆ ಅನುಭವಿಗಳಾದ ಕ್ರಿಸ್‌ ವೋಕ್ಸ್‌ ಮತ್ತು ಮಾರ್ಕ್ ವುಡ್‌ ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದು, ಅಗತ್ಯ ಬಿದ್ದರೆ ಸಾಂದರ್ಭಿಕ ಸ್ಪಿನ್ನರ್‌ ಆಗಿ ಮಾಜಿ ನಾಯಕ ಜೋ ರೂಟ್‌ ತಮ್ಮ ಕೈಚಳಕ ಪ್ರದರ್ಶಿಸಲಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್‌ ಆಯ್ಕೆ ಮಾಡಿಕೊಂಡಿರುವ ಪ್ಲೇಯಿಂಗ್‌ 11 ಹೀಗಿದೆ
01. ಬೆನ್‌ ಡಕೆಟ್‌
02. ಝ್ಯಾಕ್‌ ಕ್ರಾವ್ಲಿ
03. ಓಲ್ಲೀ ಪೋಪ್
04. ಜೋ ರೂಟ್‌
05. ಹ್ಯಾರಿ ಬ್ರೂಕ್‌
06. ಬೆನ್‌ ಸ್ಟೋಕ್ಸ್‌ (ನಾಯಕ)
07. ಜಾಣಿ ಬೈರ್‌ಸ್ಟೋವ್ (ವಿಕೆಟ್‌ಕೀಪರ್‌)                                                                                                                                                  08. ಸ್ಟುವರ್ಟ್‌ ಬ್ರಾಡ್‌
09. ಓಲ್ಲೀ ರಾಬಿನ್ಸನ್‌
10. ಜಾರ್ಶ್ ಟಂಗ್‌
11. ಜೇಮ್ಸ್‌ ಆಂಡರ್ಸನ್‌

ಆಸ್ಟ್ರೇಲಿಯಾ ತಂಡದ ಸಂಭಾವ್ಯ 11
01. ಡೇವಿಡ್‌ ವಾರ್ನರ್‌
02. ಉಸ್ಮಾನ್‌ ಖವಾಜ
03. ಮಾರ್ನಸ್‌ ಲಾಬುಶೇನ್‌
04. ಸ್ಟೀವ್ ಸ್ಮಿತ್‌ (ಉಪನಾಯಕ)
05. ಟ್ರಾವಿಸ್‌ ಹೆಡ್‌
06. ಕ್ಯಾಮೆರಾನ್ ಗ್ರೀನ್‌
07. ಅಲೆಕ್ಸ್‌ ಕೇರಿ (ವಿಕೆಟ್‌ಕೀಪರ್‌)
08. ಪ್ಯಾಟ್‌ ಕಮಿನ್ಸ್‌ (ನಾಯಕ)
09. ನೇಥನ್ ಲಯಾನ್‌                                                                                                                                                                            10. ಜಾಶ್‌ ಹೇಝಲ್‌ವುಡ್‌
11. ಮಿಚೆಲ್‌ ಸ್ಟಾರ್ಕ್‌

ದಿ ಲಾರ್ಡ್ಸ್‌ ಕ್ರೀಡಾಂಗಣದ ಪಿಚ್‌ ವರದಿ: ಜೂನ್‌ 28ರಂದು ಶುರುವಾಗಲಿರುವ ದಿ ಆಷಸ್‌ ಟೆಸ್ಟ್‌ ಸರಣಿಯ ಎರಡನೇ ಪಂದ್ಯಕ್ಕೆ ಕ್ರಿಕೆಟ್‌ ಕಾಶಿ ದಿ ಲಾರ್ಡ್ಸ್‌ ಕ್ರೀಡಾಂಗಣ ಆತಿಥ್ಯ ವಹಿಸಿಕೊಂಡಿದೆ. 2 ದಿನ ಮುಂಚೆ ಪಿಚ್‌ನ ಸ್ಥಿತಿಗತಿಯು ಹಸಿರು ಹುಲ್ಲುಹಾಸನ್ನು ಹೊದ್ದಿ ಮಲಗಿದಂತೆ ಇದೆ. ಪಂದ್ಯದ ದಿನ ಪಿಚ್ ಕ್ಯೂರೇಟರ್‌ ಹುಲ್ಲನ್ನು ಕೊಂಚ ಕತ್ತರಿಸಬಹುದು. ಆದರೂ, ಈ ಪಿಚ್‌ನಲ್ಲಿ ವೇಗಿಗಳ ಅಬ್ಬರ ನಿರೀಕ್ಷಿಸಬಹದು. ಇನ್ನು ಹವಾಮಾನ ವರದಿ ಪ್ರಕಾರ ಪಂದ್ಯದ ಮೊದಲ ದಿನವಾದ ಬುಧವಾರ ಮೋಡ ಮುಚ್ಚಿದ ವಾತಾವರಣ ಇರಲಿದೆ. ವೇಗಿಗಳು ಇದರ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವೇಗ ಮತ್ತು ಬೌನ್ಸ್‌ಗೆ ನೆರವಾಗುವ ಈ ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಯಾವುದೇ ಲಾಭ ಲಭ್ಯವಾಗುವುದಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ