ಖoಡ್ಲಾ: ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗ ಕೆಎಲ್ ರಾಹುಲ್ ಬಾಲಿವುಡ್ ನಟಿ ಆಥಿಯಾ ಶೆಟ್ಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮವಾರ ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ನಲ್ಲಿ ತಾರಾ ಜೋಡಿ ಶುಭ ಮುಹೂರ್ತದಲ್ಲಿ ವಿವಾಹವಾದರು.
ಈ ಶುಭಘಳಿಗೆಯನ್ನು ಉಭಯ ಕುಟುಂಬಗಳ ಆಪ್ತರು ಕಣ್ತುಂಬಿಕೊಂಡರು. ವಿಶೇಷವಾಗಿ ಬಾಲಿವುಡ್ನ ಕೆಲ ಸೆಲೆಬ್ರಿಟಿ ಹಾಗೂ ಕೆಲ ಕ್ರಿಕೆಟಿಗರು ತಾರಾ ಜೋಡಿಯ ವಿವಾಹಕ್ಕೆ ಸಾಕ್ಷಿಯಾದರು.
ಹೊಸ ಜೀವನಕ್ಕೆ ಕಾಲಿಟ್ಟಿರುವ ನವಜೋಡಿಯು ಮುಂಬೈನಲ್ಲಿ ಆರಕ್ಷತೆ ಏರ್ಪಡಿಸಲಿದೆ. ಈ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರು ಸೇರಿದಂತೆ, ಬಾಲಿವುಡ್ನ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳಾದ ಆಥಿಯಾ ಅವರನ್ನು ಕೆಎಲ್ ರಾಹುಲ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಎರಡೂ ಕುಟುಂಬಸ್ಥರು ನಿರ್ಧರಿಸಿದ ಮುಹೂರ್ತದಲ್ಲಿ ಪ್ರೇಮ ಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಪ್ರಣಯ ಪಕ್ಷಿಗಳಾಗಿದ್ದಾರೆ.
ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ತಂಡಕ್ಕೆ ಮರಳಲಿದ್ದಾರೆ.