Mysore
20
overcast clouds
Light
Dark

IPL 2024: ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ; ಪ್ಲೇಆಫ್‌ ಕನಸು ಇನ್ನೂ ಜೀವಂತ

royal challengers bengaluru beats delhi capitals

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್‌ನ 62ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ಗಳ ಗೆಲುವು ಸಾಧಿಸುವುದರ ಮೂಲಕ ತನ್ನ ಪ್ಲೇಆಫ್‌ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ರಜತ್‌ ಪಾಟಿದಾರ್‌ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 187 ರನ್‌ ಕಲೆಹಾಕಿ ಡೆಲ್ಲಿಗೆ 188 ರನ್‌ಗಳ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟುವಲ್ಲಿ ವಿಫಲವಾದ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಸಿಬಿ ಬೌಲಿಂಗ್‌ ದಾಳಿಗೆ ಮಂಕಾಗಿ 19.1 ಓವರ್‌ಗಳಲ್ಲಿ 140 ರನ್‌ಗಳಿಗೆ ಆಲ್‌ಔಟ್‌ ಆಯಿತು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ 27 (13) ರನ್‌ ಮತ್ತು ಫಾಫ್‌ ಡುಪ್ಲೆಸಿಸ್‌ 6 (7) ರನ್‌ ಗಳಿಸಿದರು. ಪವರ್‌ಪ್ಲೇನಲ್ಲೇ ತನ್ನ ಪ್ರಮುಖ ಎರಡು ವಿಕೆಟ್‌ ಕಳೆದುಕೊಂಡ ತಂಡಕ್ಕೆ ವಿಲ್‌ ಜಾಕ್ಸ್‌ ಹಾಗೂ ರಜತ್‌ ಪಾಟಿದಾರ್‌ ಜತೆಯಾಟ ಚೇತರಿಕೆ ನೀಡಿತು. ವಿಲ್‌ ಜಾಕ್ಸ್‌ 41 (29) ರನ್‌ ಗಳಿಸಿದರೆ, ರಜತ್‌ ಪಾಟಿದಾರ್‌ 52 (32) ರನ್‌ ಬಾರಿಸಿದರು. ಇನ್ನುಳಿದಂತೆ ಮಹಿಪಾಲ್‌ ಲೊಮ್ರೊರ್‌ 13 (8) ರನ್‌, ದಿನೇಶ್‌ ಕಾರ್ತಿಕ್ ಡಕ್‌ಔಟ್‌, ಸ್ವಪ್ನಿಲ್‌ ಸಿಂಗ್‌ ಡಕ್‌ಔಟ್‌, ಕರ್ಣ್‌ ಶರ್ಮಾ 6 (4) ರನ್‌, ಮೊಹಮ್ಮದ್‌ ಸಿರಾಜ್‌ ಡಕ್‌ಔಟ್‌ ಮತ್ತು ಕೆಮರಾನ್‌ ಗ್ರೀನ್‌ ಅಜೇಯ 32 (24) ರನ್‌ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಖಲೀಲ್‌ ಅಹ್ಮದ್‌ ಮತ್ತು ರಸಿಖ್‌ ಸಲಾಮ್ ತಲಾ ಎರಡೆರಡು ವಿಕೆಟ್‌ ಹಾಗೂ ಇಶಾಂತ್‌ ಶರ್ಮಾ, ಮುಖೇಶ್‌ ಕುಮಾರ್‌ ಮತ್ತು ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌ 1 (2) ರನ್‌ ಮತ್ತು ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ 21 (8) ರನ್‌ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟವನ್ನಾಡಿದ ಅಕ್ಷರ್‌ ಪಟೇಲ್‌ 57 (39) ರನ್‌ ಬಾರಿಸಿದರು. ಇನ್ನುಳಿದಂತೆ ಅಭಿಷೇಕ್‌ ಪೊರೆಲ್‌ 2 (3) ರನ್‌, ಶಾಯ್‌ ಹೋಪ್‌ 29 (23) ರನ್‌, ಕುಮಾರ್‌ ಕುಶಾಗ್ರ 2 (3) ರನ್‌, ಟ್ರಿಸ್ಟನ್‌ ಸ್ಟಬ್ಸ್‌ 3 (4) ರನ್‌, ರಸಿಖ್‌ ಸಲಾಮ್‌ 10 (12) ರನ್‌, ಮುಖೇಶ್‌ ಕುಮಾರ್‌ 3 (7) ರನ್‌, ಕುಲ್‌ದೀಪ್‌ ಯಾದವ್‌ 6 (10) ರನ್‌ ಮತ್ತು ಇಶಾಂತ್‌ ಶರ್ಮಾ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಯಶ್‌ ದಯಾಳ್‌ 3 ವಿಕೆಟ್‌, ಲಾಕಿ ಫರ್ಗ್ಯುಸನ್‌ 2 ವಿಕೆಟ್‌, ಕೆಮರಾನ್‌ ಗ್ರೀನ್‌, ಮೊಹಮ್ಮದ್‌ ಸಿರಾಜ್‌ ಮತ್ತು ಸ್ವಪ್ನಿಲ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.