Mysore
24
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

IPL 2024: ಲಕ್ನೋ ಮಣಿಸಿ ಶುಭಾರಂಭ ಮಾಡಿದ ರಾಜಸ್ಥಾನ್‌ ರಾಯಲ್ಸ್‌

ಜೈಪುರ: ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್‌ನ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ರಾಜಸ್ಥಾನ್ ರಾಯಲ್ಸ್‌ 20 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಳಲ್ಲಿ 4 ವಿಕೆಟ್‌ ನಷ್ಟಕ್ಕೆ 193 ರನ್‌ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಗೆಲ್ಲಲು 194 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ ಕಲೆಹಾಕಿತು.

ರಾಜಸ್ಥಾನ್‌ ರಾಯಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಹಾಗೂ ಜೋಸ್‌ ಬಟ್ಲರ್‌ ಅಬ್ಬರದ ಆರಂಭವನ್ನು ಕಟ್ಟಿಕೊಡುವಲ್ಲಿ ವಿಫಲರಾದರು. ಬಟ್ಲರ್‌ 11 (9) ರನ್‌ಗಳಿಗೆ ಔಟ್‌ ಆದರೆ, ಜೈಸ್ವಾಲ್‌ 24 (12) ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹೀಗೆ ಮೊದಲೆರಡು ವಿಕೆಟ್‌ಗಳನ್ನು ಪವರ್‌ಪ್ಲೇನಲ್ಲಿಯೇ ಕಳೆದುಕೊಂಡ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್ಸನ್‌ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಯಾನ್‌ ಪರಾಗ್ ಆಸರೆಯಾದರು. 52 ಎಸೆತಗಳಲ್ಲಿ 3 ಬೌಂಡರಿ ಹಾಗೂ 6 ಸಿಕ್ಸರ್‌ ಒಳಗೊಂಡಂತೆ 82 ರನ್‌ ಬಾರಿಸಿದ ಸಂಜು ಸ್ಯಾಮ್ಸನ್‌ ಅಜೇಯರಾಗಿ ಉಳಿದರು. ರಿಯಾನ್‌ ಪರಾಗ್‌ ‌29 ಎಸೆತಗಳಲ್ಲಿ 43 ರನ್‌ ಬಾರಿಸಿದರು. ಇನ್ನುಳಿದಂತೆ ಹೆಟ್ಮಾಯೆರ್‌ 5 (7) ರನ್‌ ಕಲೆಹಾಕಿದರೆ, 12 ಎಸೆತಗಳಲ್ಲಿ 20 ರನ್‌ ಬಾರಿಸಿದ ಧ್ರುವ್ ಜುರೆಲ್‌ ಅಜೇಯರಾಗಿ ಉಳಿದರು.

ಲಕ್ನೋ ಸೂಪರ್‌ ಜೈಂಟ್ಸ್‌‌ ಪರ ನವೀನ್‌ ಉಲ್‌ ಹಕ್‌ 2 ವಿಕೆಟ್ ಮತ್ತು ಮೊಹ್ಸಿನ್‌ ಖಾನ್‌ ಹಾಗೂ ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್‌ ಪಡೆದರು.

ಲಕ್ನೋ ಸೂಪರ್‌ ಜೈಂಟ್ಸ್‌ ಇನ್ನಿಂಗ್ಸ್:‌ ರಾಜಸ್ಥಾನ್‌ ನೀಡಿದ ಗುರಿಯನ್ನು ಬೆನ್ನಟ್ಟಿದ ಲಕ್ನೋ ಮೊದಲನೇ ಓವರ್‌ನಲ್ಲಿಯೇ ಕ್ವಿಂಟನ್‌ ಡಿಕಾಕ್‌ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಡಿಕಾಕ್‌ 4 (5) ರನ್‌ ಗಳಿಸಿ ಔಟ್‌ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್‌ ಪಡಿಕ್ಕಲ್‌ ಶೂನ್ಯ ಸುತ್ತಿದರು. ಆಯುಷ್‌ ಬದೋನಿ 1 (5) ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇತ್ತ ವಿಕೆಟ್‌ಗಳು ಉರುಳುತ್ತಿದ್ದರೆ ಅತ್ತ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಕೆಎಲ್‌ರಾಹುಲ್‌ಗೆ ದೀಪಕ್‌ ಹೂಡಾ ಕೈಜೋಡಿಸಿದರಾದರೂ 26 (13) ರನ್‌ಗಳಿಗೆ ನಿರ್ಗಮಿಸಿದರು. ಹೀಗೆ 60 ರನ್‌ಗಳಿಗೆ ತನ್ನ 4 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಐದನೇ ವಿಕೆಟ್‌ಗೆ ಜತೆಯಾದ ಕೆಎಲ್‌ ರಾಹುಲ್ ಹಾಗೂ ನಿಕೋಲಸ್‌ ಪೂರನ್‌ ಜೋಡಿ ಗೆಲುವಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ 17ನೇ ಓವರ್‌ನಲ್ಲಿ ಕೆಎಲ್‌ ರಾಹುಲ್‌ 58 (44) ರನ್‌ ಗಳಿಸಿದ್ದಾಗ ಔಟ್‌ ಆದರು. ಮಾರ್ಕಸ್‌ ಸ್ಟಾಯ್ನಿಸ್‌ 3 (4) ರನ್‌ ಗಳಿಸಿದರೆ, ಕೃನಾಲ್‌ ಪಾಂಡ್ಯ ಅಜೇಯ 3 (5) ರನ್‌ ಕಲೆಹಾಕಿದರು ಮತ್ತು ನಿಕೋಲಸ್‌ ಪೂರನ್‌ ಅಜೇಯ 64 (41) ರನ್‌ ಬಾರಿಸಿದರು.

ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೌಲ್ಟ್‌ 2 ವಿಕೆಟ್‌ ಪಡೆದರೆ, ನಾಂಡ್ರೆ ಬರ್ಗರ್‌, ರವಿಚಂದ್ರನ್‌ ಅಶ್ವಿನ್‌, ಯುಜುವೇಂದ್ರ ಚಹಾಲ್‌ ಹಾಗೂ ಸಂದೀಪ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

Tags: