ನವದೆಹಲಿ: ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದ್ದು, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಭಾರತ ತಂಡ ಟ್ರೋಫಿ ಎತ್ತಿ ಹಿಡಿದಿದೆ.
ಟೂರ್ನಿ ಮುಗಿದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್ 2024ರ ಡ್ರೀಮ್ ಟೀಂ ಪ್ರಕಟಗೊಳಿಸಿದೆ. ಈ ತಂಡದಲ್ಲಿ ಟೀಂ ಇಂಡಿಯಾದ ಆರು ಮಂದಿ ಆಟಗಾರರು ಸ್ಥಾನ ಪಡೆದಿದ್ದಾರೆ.
ಅಚ್ಚರಿಯಂಬಂತೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಇದು ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬೇಸರ ಉಂಟುಮಾಡಿದೆ.
ಇನ್ನು ಈ ಡ್ರೀಮ್ ಟೀಂ ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್ ಮತ್ತು ವೇಗಿ ಬುಮ್ರಾ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.
ಇತ್ತ ಈ ಟೂರ್ನಿಯುದ್ದಕ್ಕೂ ಅಚ್ಚರಿಯ ಅಟವಾಡಿದ ರೆಹಮಾನುಲ್ಲಾ ಗುರ್ಬಾಜ್, ಅಫ್ಘನ್ ನಾಯಕ ರಶೀದ್ ಖಾನ್ ಹಾಗೂ ಫಜಲ್ ಫರೂಕಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಆಸೀಸ್ ತಂಡದಿಂದ ಸ್ಟೋಯ್ನಿಸ್, ವೆಸ್ಟ್ ಇಂಡೀಸ್ ತಂಡದಿಂದ ನಿಕೊಲಸ್ ಪೂರನ್ ಸ್ಥಾನ ಪಡೆದಿದ್ದಾರೆ. 12 ಆಟಗಾರನಾಗಿ ಎನ್ರಿಚ್ ನೋಕಿಯೋ ಕಾಣಿಸಿಕೊಂಡಿದ್ದಾರೆ.





