ನವದೆಹಲಿ: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಒಲಿಂಪಿಕ್ಸ್‌ನ ಮಹಿಳೆಯರ 50ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪುವ ಮೂಲಕ ಗಮನರ್ಹ ಸಾಧನೆ ಮಾಡಿದ್ದರು.
ಇನ್ನೇನು ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕ ಖಚಿತ ಎನ್ನುತ್ತಿರುವಾಗಲೇ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಯಿತು. ಅವರು 50 ಕೆಜಿಗಿಂತಲೂ 100ಗ್ರಾಮ್ ತೂಕ ಹೆಚ್ಚಿದ್ದಾರೆ ಎಂದು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಯಿತು.
ಈ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ಮೇಲ್ಮನವಿಯನ್ನು ವಿನೇಸ್ ಫೋಗಟ್ ಸಲ್ಲಿಸಿದರು. ಅಂತಿಮವಾಗಿ ತಮಗೆ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕೋರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಫೋಗಟ್ ಅನರ್ಹತೆಯನ್ನು ಎತ್ತಿಹಿಡಿದು, ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ನ್ಯಾಯಾಲದಲ್ಲಿ ಆದರೂ ಭಾರತಕ್ಕೆ ಪದಕ ಸಿಗಲಿದೆ ಎಂದು ನಂಬಿಕೊಂಡಿದ್ದ ಕೋಟ್ಯಾಂತರ ಭಾರತೀಯರ ಪದಕದ ಕನಸು ನುಚ್ಚು ನೂರಾಗಿದೆ.