ಏಷ್ಯಾಕಪ್: ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸಂಘಟಿತ ಹೋರಾಟದಿಂದ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ. ಹಾಂಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 40 ರನ್ ಗೆಲುವು ಸಾಧಿಸಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ 192 ರನ್ ಸಿಡಿಸಿದ್ದ ಭಾರತ ಹಾಂಕಾಂಗ್ ತಂಡವನ್ನು 152 ರನ್‌ಗಳಿಗೆ ಕಟ್ಟಿ ಹಾಕಿತು. ಇದರೊಂದಿಗೆ ಲೀಗ್ ಹಂತದ ಎರಡೂ ಪಂದ್ಯ ಗೆದ್ದು 4 ಅಂಕಗಳೊಂದಿಗೆ ಭಾರತ ಎ ಗಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಹಾಂಕಾಂಗ್ ಗೆಲುವಿಗೆ ಭಾರತ 193 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಮೊತ್ತ ನೋಡಿ ಹಾಂಕಾಂಗ್ ಬೆಚ್ಚಿ ಬೀಳಲಿಲ್ಲ. ದಿಟ್ಟ ಹೋರಾಟ ಆರಂಭಿಸಿತು. ಹಾಂಕಾಂಗ್‌ಗೆ ನಿರೀಕ್ಷಿತ ಆರಂಂಭ ಸಿಗಲಿಲ್ಲ. ಆದರೆ ಆರಂಭಿಕರ ಪತನದ ಬಳಿಕ ಹಾಂಕಾಂಗ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಮೂಲಕ ಚೇತರಿಸಿಕೊಂಡಿತು. ನಾಯಕ ನಿಜಾಕತ್ ಖಾನ್ ಹಾಗೂ ಆರಂಭಿಕ ಯಾಸಿಮ್ ಮುರ್ತುಜಾ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಈ ಜೋಡಿ 12 ರನ್ ಜೊತೆಯಾಟ ನೀಡಿತು. ನಿಜಾಕತ್ ಖಾನ್ 10 ರನ್ ಸಿಡಿಸಿ ಔಟಾದರೆ, ಮುರ್ತುಜಾ 9 ರನ್ ಸಿಡಿಸಿ ನಿರ್ಗಮಿಸಿದರು.
ಆರಂಭಿಕರ ವಿಕೆಟ್ ಪತನದ ಬಳಿಕ ಬಾಬರ್ ಹಯಾತ್ ಹಾಗೂ ಕಿಂಚಿತ್ ಶಾ ಜೊತೆಯಾಟದಿಂದ ಹಾಂಕಾಂಗ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ಬಾಬರ್ ಹಯಾತ್ 35 ಎಸೆತದಲ್ಲಿ 41 ರನ್ ಸಿಡಿಸಿ ಔಟಾದರು. ಹಾಂಕಾಂಗ್ 74 ರನ್‌ಗಳಿಗೆ 3ನೇ ವಿಕೆಟ್ ಕಳೆದುಕೊಂಡಿತು. ಆದರೆ ಹೋರಾಟ ಕೈಚೆಲ್ಲಲಿಲ್ಲ. ಕಿಂಚಿತ್ ಶಾ ಹಾಗೂ ಐಜಾಜ್ ಖಾನ್ ಜೊತೆಯಾಟ ಆರಂಭಗೊಂಡಿತು. ಆದರೆ ಐಜಾಜ್ ಖಾನ್ 14 ರನ್ ಸಿಡಿಸಿ ಔಟಾದರು.
ಇತ್ತ ಹೋರಾಟ ನೀಡಿದ ಕಿಂಚಿತ್ ಶಾ 30 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ಜೀಶಾನ್ ಆಲಿ ಹಾಗೂ ಸ್ಕಾಟ್ ಮೆಕೈನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಗೆಲುವು ಸಿಗಲಿಲ್ಲ. ಜೀಶಾನ್ ಅಜೇಯ 26 ರನ್ ಸಿಡಿಸಿದರು. ಸ್ಕಾಟ್ ಅಜೇಯ 16 ರನ್ ಸಿಡಿಸಿದರು. ಈ ಮೂಲಕ ಹಾಂಕಾಗ್ 5 ವಿಕೆಟ್ ಕಳೆದುಕೊಂಡು 152 ರನ್ ಸಿಡಿಸಿತು. ಇದರೊಂದಿಗೆ ಟೀಂ ಇಂಡಿಯಾ 40 ರನ್ ಗೆಲುವು ದಾಖಲಿಸಿತು.
ಹಾಂಕಾಂಗ್ ವಿರುದ್ದ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 192 ರನ್ ಸಿಡಿಸಿತು. ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 13 ಎಸೆತದಲ್ಲ 21 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ 39 ಎಸೆತದಲ್ಲಿ 36 ರನ್ ಸಡಿಸಿ ಔಟಾದರು. ಇತ್ತ ವಿರಾಟ್ ಕೊಹ್ಲಿ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರು. ಲಯಕಂಡು ಕೊಂಡ ಕೊಹ್ಲಿ ಅಬ್ಬರ ಆರಂಭಿಸಿದರು. ಇತ್ತ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.
ಫಾರ್ಮ್‌ಗೆ ಮರಳಿದ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಸಿಕ್ಸರ್ ಮೂಲಕ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ 22 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಕೊಹ್ಲಿ 44 ಎಸೆತದಲ್ಲಿ ಅಜೇಯ 59 ರನ್ ಸಿಡಿಸಿದರು. ಇತ್ತ ಸೂರ್ಯಕುಮಾರ್ ಯಾದವ್ 26 ಎಸೆತದಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ ಅಜೇಯ 68 ರನ್ ಸಿಡಿಸಿದರು. ಇದರೊಂದಿಗೆ ಭಾರತ 192 ರನ್ ಸಿಡಿಸಿತು.