ಚಿತ್ತಗಾಂಗ್: ಆರಂಭಿಕ ಬ್ಯಾಟರ್ ಜಾಕಿರ್ ಹಸನ್(100ರನ್,224 ಎಸೆತ,13 ಬೌಂಡರಿ,1 ಸಿಕ್ಸರ್) ಹಾಗೂ ನಾಯಕ ಶಕೀಬ್ ಅಲ್ ಹಸನ್(84 ರನ್,108 ಎಸೆತ,6 ಬೌಂಡರಿ,6ಸಿಕ್ಸರ್) ಹಾಗೂ ಮತ್ತೋರ್ವ ಆರಂಭಿಕ ದಾಂಡಿಗ ನಜ್ಮುಲ್ ಹೊಸೈನ್(67ರನ್,156 ಎಸೆತ,7 ಬೌಂಡರಿ) ಅವರ ಆಟ ಭಾರತದ ವಿರುದ್ಧ ಪ್ರಥಮ ಟೆಸ್ಟ್ ಗೆಲ್ಲಲು ಸಾಧ್ಯವಾಗಿಲ್ಲ.ಬದಲಿಗೆ ಭಾರತ ಟೆಸ್ಟ್ ನ ಐದು ದಿನವೂ ಮೇಲುಗೈ ಸಾಧಿಸುವದರೊಂದಿಗೆ ಮೊದಲ ಟೆಸ್ಟ್ ನಲ್ಲಿ 188 ರನ್ ಗಳ ಅಧಿಕಾರಯುತ ಗೆಲುವು ದಾಖಲಿಸುವ ಮೂಲಕ 1-0ಮುನ್ನಡೆ ಗಳಿಸಿದೆ.
ಚಿತ್ತಗಾಂಗ್ ನ ಜಹುರ್ ಅಹ್ಮದ್ ಚೌಧುರಿ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಪ್ರಥಮ ಇನ್ನಿಂಗ್ಸ್ ನಲ್ಲಿ 404 ಗೌರವಯುತ ರನ್ ಕಲೆ ಹಾಕಿತ್ತು.ಪ್ರತಿಯಾಗಿ ಬಾಂಗ್ಲಾದೇಶ 150 ಗಳಿಸಿ ಆಲೌಟ್ ಆಗಿದ್ದು ಫಾಲೋಆನ್ ಭೀತಿ ಎದುರಿಸಿತ್ತು.ಈ ಹಂತದಲ್ಲಿ ಭಾರತದ ನಾಯಕ ಕೆ.ಎಲ್.ರಾಹುಲ್ ಫಾಲೋಆನ್ ಹೇರದೆ ಬ್ಯಾಟಿಂಗ್ ಗೆ ನಿರ್ಧರಿಸಿದರು.

ವಿಕೆಟ್ ಕೀಪರ್ ಶುಭಮನ್ ಗಿಲ್(110) ಹಾಗೂ ಅನುಭವಿ ದಾಂಡಿಗ ಚೇತೇಶ್ವರ ಪೂಜಾರ(ಔಟಾಗದೆ 102)ರನ್ ನೆರವಿನಿಂದ 258/2ರನ್ ಗೆ ನಾಯಕ ರಾಹುಲ್ ಡಿಕ್ಲೇರ್ ಘೋಷಣೆ ಮಾಡಿಕೊಂಡು ಬಾಂಗ್ಲಾಗೆ ಗೆಲ್ಲಲು 513ರನ್ ಗಳ ಸವಾಲಿನ ಗುರಿ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿ ಬಾಂಗ್ಲಾ ಅಲ್ಪ ಮೊತ್ತಕ್ಕೆ ಕುಸಿಯಲು ಪ್ರಮುಖ ಕಾರಣರಾಗಿದ್ದ ಕುಲದೀಪ್ ಯಾದವ್ ದ್ವಿತೀಯ ಇನ್ನಿಂಗ್ಸ್ ನಲ್ಲಿಯೂ ನಾಯಕ ಶಕೀಬ್ ಅಲ್ ಹಸನ್ ನನ್ನು ಕ್ಲೀನ್ ಬೋಲ್ಡ್ ಮಾಡುವ ಮೂಲಕ 3 ವಿಕೆಟ್ ಕಬಳಿಸಿ ಒಟ್ಟಾರೆ 8ವಿಕೆಟ್ ಸಾಧನೆ ಮಾಡುವ ಮೂಲಕ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಮೊದಲ ಇನ್ನಿಂಗ್ಸ್ ನಲ್ಲಿ 90ರನ್ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 102 ರನ್ ಕಲೆಹಾಕಿದ ಚೇತೇಶ್ವರ ಪೂಜಾರ ಅವರೂ ಪ್ರಾಯೋಜಕರ ವಿಶೇಷ ಬಹುಮಾನ ಗಳಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ 3ವಿಕೆಟ್ ಗಳಿಸಿದ್ದ ವೇಗದ ಬೌಲರ್ ಮಹಮ್ಮದ್ ಸಿರಾಜ್ ದ್ವಿತೀಯ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದ 1 ವಿಕೆಟ್ ಕೀಳಲು ಮಾತ್ರಾ ಶಕ್ತರಾದರು.ಆದರೆ ಅಕ್ಷರ್ ಪಟೇಲ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಸಾಧನೆ ಮಾಡುವದರೊಂದಿಗೆ ಪ್ರಥಮ ಟೆಸ್ಟ್ ನಲ್ಲಿ ಒಟ್ಟಾರೆ 5 ವಿಕೆಟ್ ಗಳಿಸಿದರು.
ಅಂತಿಮ ದಿನದ ಕೇವಲ ಮುಕ್ಕಾಲು ಗಂಟೆಯ ಆಟದಲ್ಲಿ ಉಳಿದ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಬಾಂಗ್ಲಾ ಕೇವಲ 52 ರನ್ ಸೇರಿಸಿ 324ರನ್‌ಗಳಿಗೆ ಆಲೌಟ್ ಆಯಿತು.188ರನ್ ಗೆಲುವಿನೊಂದಿಗೆ 1-0ಅಂತರದಲ್ಲಿ ಮುನ್ನಡೆದ ಭಾರತ ದ್ವಿತೀಯ ಟೆಸ್ಟ್ ಪಂದ್ಯವನ್ನು ಡಿ.22 ರಿಂದ 26ರ ವರೆಗೆ ಆಡಲಿದೆ.





