Light
Dark

IND v NZ ಮೊದಲ ಏಕದಿನ ಪಂದ್ಯ : ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ

ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಟೀಮ್ ಇಂಡಿಯಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಶ್ರೀಲಂಕಾ ಎದುರಿನ ಸರಣಿ ಜಯದ ಸಂಭ್ರಮದಲ್ಲಿರುವ ಭಾರತ ತಂಡ ಇಂದು ನ್ಯೂಜಿಲೆಂಡ್ ಸವಾಲು ಎದುರಿಸಲು ಸಿದ್ಧವಾಗಿದೆ.  ಆದರೆ, ಬೆನ್ನುನೋವಿನಿಂದಾಗಿ ಮಧ್ಯಮಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಇಲ್ಲದೇ ತಂಡವು ಕಣಕ್ಕಿಳಿಯಲಿದೆ. ಏಕದಿನ ಕ್ರಿಕೆಟ್ ಸರಣಿಯ ಮೂರು ಪಂದ್ಯಗಳಿಗೂ ಶ್ರೇಯಸ್ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ರಜತ್ ಪಾಟೀದಾರ್ ಅವರು ರೋಹಿತ್‌ ಶರ್ಮಾ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಸರಣಿಯಲ್ಲಿ ಮಧ್ಯಮಕ್ರಮಾಂಕದಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಕೂಡ ವಿಶ್ರಾಂತಿ ಪಡೆದಿದ್ದು, ವಿಕೆಟ್‌ಕೀಪರ್ ಆಗಿ ಇಶಾನ್ ಕಿಶನ್ ಆಡಲಿದ್ದಾರೆ. ನಾಯಕ ರೋಹಿತ್ ಮತ್ತು ಸ್ಥಿರತೆ ಕಾಪಾಡಿಕೊಂಡಿರುವ ಶುಭಮನ್ ಗಿಲ್ ಜೋಡಿಯೇ ಇನಿಂಗ್ಸ್ ಆರಂಭಿಸುವುದು ಖಚಿತ. ಶ್ರೀಲಂಕಾ ಎದುರು ಒಂದು ಅರ್ಧಶತಕ ಹಾಗೂ ಶತಕ ಗಳಿಸಿರುವ ಗಿಲ್ ಆಯ್ಕೆಗಾರರ ವಿಶ್ವಾಸ ಉಳಿಸಿಕೊಂಡಿದ್ದಾರೆ.  ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಮತ್ತೆ ತಮ್ಮ ಲಯಕ್ಕೆ ಮರಳಿದ್ದು ಶತಕ ಗಳಿಸಿದ್ದಾರೆ. ಅವರಲ್ಲದೇ ಸೂರ್ಯ ಕುಮಾರ್ ಯಾದವ್, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.  ಬೌಲಿಂಗ್‌ ವಿಭಾಗದಲ್ಲಿ ಸಿರಾಜ್, ಶಮಿ, ಸ್ಪಿನ್ನರ್ ಕುಲದೀಪ್ ಮತ್ತು ಚಾಹಲ್ ಉತ್ತಮ ಲಯದಲ್ಲಿರುವುದು ತಂಡದಲ್ಲಿ ಹುಮ್ಮಸ್ಸು ಹೆಚ್ಚಿಸಿದೆ.  ಕಿವೀಸ್ ಬಳಗದಲ್ಲಿ ಅನುಭವಿಗಳಾದ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿ ಅವರು ಈ ಸರಣಿಯಲ್ಲಿ ಆಡುತ್ತಿಲ್ಲ. ಅದರಿಂದಾಗಿ ಟಾಮ್ ಲಥಾಮ್ ನಾಯಕತ್ವ ವಹಿಸುತ್ತಿದ್ದಾರೆ. ನ್ಯೂಜಿಲೆಂಡ್ ತಂಡವು ಪಾಕಿಸ್ತಾನದಲ್ಲಿ ನಡೆದ ಸರಣಿಯಲ್ಲಿ ಆಡಿದ ನಂತರ ಭಾರತಕ್ಕೆ ಬಂದಿಳಿದಿದೆ.

ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಗ್ಲೆನ್ ಫಿಲಿಪ್ಸ್ ಅಮೋಘವಾಗಿ ಆಡಿದ್ದರು. ಅವರನ್ನು ಕಟ್ಟಿಹಾಕುವುದು ಆತಿಥೇಯ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು.

ತಂಡಗಳು ಇಂತಿವೆ 
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೆ, ಹೆನ್ರಿ ನಿಕೊಲ್ಸ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಬ್ರೆಸ್‌ವೆಲ್, ಮಿಚೆಲ್ ಸ್ಯಾಂಟನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗ್ಯುಸನ್, ಬ್ಲೇರ್ ಟಿಕ್ನರ್

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ