ಮುಂಬೈ: ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಈಗ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲೂ ಮುಗ್ಗರಿಸಿದ್ದಾರೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಮತ್ತು ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದಾರೆ.
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೋತು ಟೀಕೆಗೆ ಗುರಿಯಾಗಿದ್ದ ಟೀ ಇಂಡಿಯಾದ ಆಟಗಾರರು ದೇಶಿಯ ಕ್ರಿಕೆಟ್‌ನಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ಆದರೆ ರಣಜಿ ಟ್ರೋಫಿಯಲ್ಲಿ ಆಡಿದ ಆಟಗಾರರು ಮತ್ತೆ ಕಳಪೆ ಪ್ರದರ್ಶನ ನೀಡಿದ್ದಾರೆ.
ರಣಜಿಯಲ್ಲಿ ಮುಂಬೈ ತಂಡದ ಪರ ಆಡುತ್ತಿರುವ ರೋಹಿತ್ ಶರ್ಮಾ, ಜಮ್ಮು ಮತ್ತು ಕಾಶ್ಮೀರದ ವಿರುದ್ಧದ ನಡೆದ ಪಂದ್ಯದಲ್ಲಿ ಕೇವಲ 3 ರನ್‌ಗಳಿಸಿ ಔಟ್ ಆಗಿದ್ದಾರೆ. ಹಾಗೆಯೇ ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ತಂಡದಲ್ಲಿ ಆಡುತ್ತಿದ್ದು, ಕೇವಲ 4 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ತಂಡದ ಪರವಾಗಿ ಆಡುತ್ತಿರುವ ರಿಷಭ್ ಪಂತ್ ಕೇವಲ 1 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಜಾಬ್ ಮತ್ತು ಕರ್ನಾಟಕ ತಂಡಗಳ ನಡುವಿನ ಪಂದ್ಯದಲ್ಲಿ ಶೂಭಮನ್ ಗಿಲ್ ಕೇವಲ 4 ರನ್‌ಗಳಿಸಿ ನಿರ್ಗಮಿಸಿದ್ದಾರೆ.