Mysore
25
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

Champions Trophy-2025: ಗಿಲ್‌ ಶತಕ: ಬಾಂಗ್ಲಾ ಮಣಿಸಿ ಶುಭಾರಂಭ ಮಾಡಿದ ಭಾರತ

ದುಬೈ: ಭಾರತ ತಂಡದ ಆಲ್‌ ರೌಂಡರ್‌ ಪ್ರದರ್ಶನಕ್ಕೆ ತಲೆ ಬಾಗಿದ ಬಾಂಗ್ಲಾದೇಶ, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದೆ. ಇತ್ತ ಬಾಂಗ್ಲಾ ಮಣಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಣ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 49.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 228 ರನ್‌ ಕಲೆಹಾಕಿ ಭಾರತಕ್ಕೆ 229 ರನ್‌ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 231 ಬಾರಿಸಿ ಗೆಲುವಿನ ನಗೆ ಬೀರಿತು.

ಬಾಂಗ್ಲಾ ಇನ್ನಿಂಗ್ಸ್‌: ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾಕ್ಕೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಸೌಮ್ಯ ಸರ್ಕಾರ್‌ ಮೊದಲ ಓವರ್‌ನಲ್ಲೇ ಶಮಿಗೆ ವಿಕೆಟ್‌ ಒಪ್ಪಿಸಿ ಡಕ್‌ಔಟ್‌ ಆಗಿ ಹೊರನಡೆದರೇ, ಹಸನ್‌ 25 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿದರು. ನಾಯಕ ಹೊಸೇನ್‌ ಸ್ಯಾಂಟೋ ಕೂಡಾ ಡಕ್‌ ಔಟ್‌ ಆದರು. ಬಳಿಕ ಬಂದ ಮೆಹದಿ ಹಸನ್‌ 5 ರನ್‌ಗೆ ಸುಸ್ತಾದರು. ಮುಷ್ಪಿಕರ್‌ ರಹೀಂ ಡಕ್‌ ಔಟ್‌ ಆಗಿ ಬಂದ ಹಾದಿಯಲ್ಲೇ ಮರಳಿದರು.

ಕೇವಲ 8 ಓವರ್‌ಗಳಲ್ಲಿ 35 ರನ್‌ ಗಳಿಸಿ ಪ್ರಮುಖ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾಕ್ಕೆ ಹೃದೋಯ್‌ ಹಾಗೂ ಜಾಕರ್‌ ಅಲಿ ಆಸರೆಯಾದರು. ಹೃದೋಯ್‌ 118 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಿತ 100 ರನ್‌ ಬಾರಿಸಿದರೇ, 114 ಎಸೆತಗಳಲ್ಲಿ 4 ಬೌಂಡರಿ ಸಹಿತ 68 ರನ್‌ ಗಳಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಲು ಉಪಯುಕ್ತ ಆಟವಾಡಿದರು.

ಉಳಿದಂತೆ ರಿಶಾದ್‌ ಹೊಸೇನ್‌ 18, ಹಸನ್‌ ಶಕೀಬ್‌ ಡಕ್‌ಔಟ್‌, ತಸ್ಕಿನ್‌ ಅಹ್ಮದ್‌ 3, ಮುಸ್ತಿಫಿಜೂರ್‌ ರೆಹ್ಮಾನ್‌ ಖಾತೆ ತೆರೆಯದೇ ನಾಟ್‌ ಔಟ್‌ ಆಗಿ ಉಳಿದರು.

ಭಾರತ ತಂಡದ ಪರವಾಗಿ ಮೊಹಮ್ಮದ್‌ ಶಮಿ 5, ಹರ್ಷಿತ್‌ ರಾಣಾ 3 ಹಾಗೂ ಅಕ್ಷರ್‌ ಪಟೇಲ್‌ 2 ವಿಕೆಟ್‌ ಪಡೆದು ಮಿಂಚಿದರು.

ಟೀಂ ಇಂಡಿಯಾ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ನಾಯಕ ರೋಹಿತ್‌ ಶರ್ಮಾ 41 ರನ್‌ ಗಳಿಸಿ ಔಟಾದರು. ಆದರೆ ವಿರಾಟ್‌ ಕೊಹ್ಲಿ ಕೇವಲ 22 ರನ್‌ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಬಳಿಕ ಬಂದ ಶ್ರೇಯಸ್‌ ಅಯ್ಯರ್‌ 15, ಅಕ್ಷರ್‌ ಪಟೇಲ್‌ 8 ರನ್‌ ಗಳಿಸಿ ನಿರ್ಗಮಿಸಿದರು.

ಕೊನೆಯಲ್ಲಿ ಒಂದಾದ ಗಿಲ್‌ ಹಾಗೂ ಕನ್ನಡಿಗ ಕೆ.ಎಲ್‌ ರಾಹುಲ್‌ ತಂಡಕ್ಕೆ ಗೆಲುವು ತಂದುಕೊಟ್ಟರು. ಗಿಲ್‌ ಔಟಾಗದೇ 129 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ ಸಹಿತ 101 ರನ್‌ ಗಳಿಸಿದರೇ, ಕೆ.ಎಲ್‌ ರಾಹುಲ್‌ 41 ರನ್‌ ಗಳಿಸಿ ನಾಟ್‌ಔಟ್‌ ಆಗಿ ಉಳಿದರು.

ಬಾಂಗ್ಲಾ ಪರ ರಿಶಾದ್‌ ಹೊಸೇನ್‌ ಎರಡು, ಮುಸ್ತಿಫಿಜುರ್‌ ಹಾಗೂ ತಸ್ಕಿನ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ಶುಭ್‌ಮನ್‌ ಗಿಲ್‌

Tags:
error: Content is protected !!