ಬೆಂಗಳೂರು: ಬೆಂಗಳೂರು ಬ್ಲಾಸ್ಟರ್ಸ್ ಅವರ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಗುಲ್ಬರ್ಗಾ ಮಿಸ್ಟಿಕ್ಸ್ ಅವರು ಮಹಾರಾಜ ಟ್ರೋಫಿ 2024ರ ಉದ್ಘಾಟನಾ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದೆ.
ಗುಲ್ಬರ್ಗಾ ವಿರುದ್ಧ ಗೆದ್ದ ಬೆಂಗಳೂರು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗಾ 16.4 ಓವರ್‌ಗಳಲ್ಲಿ ಆಲ್‌ಔಟ್ ಆಗಿ 116 ರನ್ ಕಲೆಹಾಕಿತು. ಆ ಮೂಲಕ ಎದುರಾಳಿಗೆ 117 ರನ್ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಬೆಂಗಳೂರು 11.2 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 117 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗುಲ್ಬರ್ಗಾ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಗುಲ್ಬರ್ಗಾ ಪರ ನಾಯಕ ದೇವ್‌ದತ್ ಪಡಿಕ್ಕಲ್ ಹಾಗೂ ಲುನ್ವಿತ್ ಸಿಸೋಡಿಯಾ ಇನ್ನಿಂಗ್ಸ್ ಆರಂಭಿಸಿದರು. ಸಿಸೋಡಿಯಾ 14(7), ನಾಯಕ ಪಡಿಕ್ಕಲ್ 20(9), ಅನೀಶ್ 4(8), ಸಮರನ್ 8(8), ಶರತ್ 13(13), ಪ್ರವೀಣ್ ದುಬೆ 19(23), ಯಶೋವರ್ಧನ್ ಔಟಾಗದೇ 11(14), ವೈಶಾಖ್ ವಿಜಯ್ ಕುಮಾರ್ ಡಕ್‌ಔಟ್, ಶೆಖಾವತ್ 10(9), ರಿತೇಶ್ ಭಟ್ಕಲ್ ಡಕ್‌ಔಟ್, ಶರಣ್ 4(6) ರನ್ ಗಳಿಸಿದರು.
ಬೆಂಗಳೂರು ಪರ ಆದಿತ್ಯಾ ಗೋಯಲ್ 3, ಲವೀಶ್ ಕುಶಾಲ್, ನವೀನ್, ಮೋಸಿನ್ ಖಾನ್ ತಲಾ ಎರಡೆರೆಡು ವಿಕೆಟ್, ಶುಭಾಂಗ್ ಹೆಗ್ಡೆ ಒಂದು ವಿಕೆಟ್ ಪಡೆದರು.
ಬೆಂಗಳೂರು ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಬೆಂಗಳೂರು ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಎಲ್ ಆರ್ ಚೇತನ್ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಬೌಂಡರಿ ಸಹಿತ 53 ರನ್ ಚಚ್ಚಿದರು.
ಬಳಿಕ ಒಂದಾದ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಭುವನ್ ರಾಜು ಔಟಾಗದೇ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಮಯಾಂಕ್ 29 ಎಸೆತಗಳಲ್ಲಿ 47 ರನ್ ಗಳಿಸಿದರೇ, ಭುವನ್ 7(5) ರನ್ ಬಾರಿಸಿ ಗೆಲುವು ತಂದುಕೊಟ್ಟರು.
ಗುಲ್ಬರ್ಗಾ ಪರ ವೈಶಾಖ್ ವಿಜಯ್ ಕುಮಾರ್ ಒಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ನವೀನ್