ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಬಿಸಿಸಿಐ, ಆಯ್ಕೆ ಸಮಿತಿಯನ್ನೇ ವಜಾಗೊಳಿಸಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಸೇರಿದಂತೆ ಸಂಪೂರ್ಣ ಸಮಿತಿಯನ್ನೇ ವಜಾ ಮಾಡಿದ್ದು, ಹೊಸ ಆಯ್ಕೆ ಸಮಿತಿ ರಚಿಸಲು ಅರ್ಜಿ ಅಹ್ವಾನಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತ್ತು. ಇದರಿಂದ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಎಲ್ಲಾ ಆಟಗಾರರನ್ನು ಕಿತ್ತೆಸೆದು ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವಂತೆ ಒತ್ತಾಯಗಳು ಕೇಳಿಬಂದಿದ್ದವು.
ಅಸಮರ್ಪಕ ಆಯ್ಕೆ ಕೂಡ ಸೋಲಿಗೆ ಪ್ರಮುಖ ಕಾರಣ ಅನ್ನೋ ಮಾತುಗಳು ಸಹ ಕೇಳಿಬಂದಿದ್ದವು. ಇದೀಗ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನೇ ಬಿಸಿಸಿಐ ವಜಾಗೊಳಿಸಿದ್ದು, ಹೊಸ ಆಯ್ಕೆ ಸಮಿತಿ ರಚಿಸಲು ಅರ್ಜಿ ಅಹ್ವಾನಿಸಿದೆ. ಅರ್ಜಿ ಹಾಕುವವರಿಗೆ ಏನೆಲ್ಲಾ ಅರ್ಹತೆಗಳು ಇರಬೇಕೆಂದು ಸಹ ತಿಳಿಸಿದೆ.
ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿಗೆ ಸದಸ್ಯ ಹಾಗೂ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಹಾಕುವ ಅಭ್ಯರ್ಥಿಗಳು ಕನಿಷ್ಠ 7 ಟೆಸ್ಟ್ ಪಂದ್ಯ ಅಥವಾ, 30 ಪ್ರಥಮ ದರ್ಜೆ ಕ್ರಿಕೆಟ್ ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯ ಆಡಿರಬೇಕು ಎಂದು ಬಿಸಿಸಿಐ ಹೇಳಿದೆ.